ತಂದೆ ತಾಯಿಗಳ ಸ್ಮರಣಾರ್ಥ ಪಲ್ಲಾ ಅವರ ಸೇವೆ ಮಾದರಿಯಾಗಿದೆ

ಸೈದಾಪುರ;ಸೆ.20:ತಮ್ಮ ತಂದೆ, ತಾಯಿಯವರ ಸ್ಮರಣಾರ್ಥ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುತ್ತಿರುವ ಪಲ್ಲಾ ಅವರ ಸೇವಾ ಮನೋಭಾವನೆಯ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಬಸವರಾಜ ಪಾಟೀಲ ಕ್ಯಾತನಾಳ ಅಭಿಪ್ರಾಯಪಟ್ಟರು.
ಪಟ್ಟಣದ ವಿದ್ಯಾ ವರ್ಧಕ ಸಂಘದ ಉಪಾಧ್ಯಕ್ಷ ಶಿಕ್ಷಣ ಪ್ರೇಮಿ ಲಕ್ಷ್ಮೀಕಾಂತ ರೆಡ್ಡಿ ಪಲ್ಲಾ ಅವರು ವೈಯಕ್ತಿಕವಾಗಿ ತಾಯಿ ದಿವಂಗತ ಪಲ್ಲಾ ವೆಂಕಟಮ್ಮ ತಂದೆ ದಿ.ಪಲ್ಲಾ ಭೀಮರೆಡ್ಡಿ ಇವರ ಸ್ಮರಣಾರ್ಥ 2021-22 ನೇ ಸಾಲಿನ ಡಿ.ಎಲ್.ಇಡಿ ದ್ವಿತೀಯ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಶರಣಮ್ಮ ಹಾಗೂ ನಾಗರತ್ನ ಇವರುಗಳಿಗೆ ಸನ್ಮಾನಿಸಿ ಪ್ರೋತ್ಸಾಹ ಧನ ವಿತರಸಿ ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಇವುಗಳ ಮಧ್ಯದಲ್ಲಿ ನಗರ ಪ್ರದೇಶದ ವಿದ್ಯಾರ್ಥಿಗಳೊಂದಿಗೆ ಸಾಧನೆ ಮಾಡುವುದು ಕಷ್ಟ ಸಾಧ್ಯವಾಗಿದ್ದೂ ಇದನ್ನು ಸಂಸ್ಥೆಯ ವಿದ್ಯಾರ್ಥಿಗಳಲ್ಲಿ ಕಾಣುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು ಇದಕ್ಕೆ ಪ್ರೋತ್ಸಾಹಿಸ ಬೇಕಾದ ಕೆಲಸ ನಮ್ಮದಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಸಣ್ಣ ಸಿದ್ರಾಮಪ್ಪಗೌಡ ಬೆಳಗುಂದಿ, ಹಿರಿಯ ಸದಸ್ಯರಾದ ಭೀಮರೆಡ್ಡಿ ಪಾಟೀಲ ಶೆಟ್ಟಹಳ್ಳಿ, ಬಸವರಾಜಯ್ಯ ಸ್ವಾಮಿ ಬದ್ದೇಪಲ್ಲಿ, ಬಸವರಾಜಪ್ಪಗೌಡ ನಿಲಗಲ್, ಬಸವರಾಜಯ್ಯ ಸ್ವಾಮಿ, ಕಾರ್ಯದರ್ಶಿ ಬಸವರಾಜ ಪಾಟೀಲ ಕ್ಯಾತನಾಳ, ಸಹ ಕಾರ್ಯದರ್ಶಿ ಕೆ.ಬಿ.ಗೋವರ್ಧನ, ಮುಖ್ಯಗುರು ಲಿಂಗಾರಡ್ಡಿ ನಾಯಕ, ಪ್ರಾಂಶುಪಾಲ ಜಿ.ಎಂ.ಗುರುಪ್ರಸಾದ, ಹಂಪಣ್ಣ ಸಜ್ಜನಶೆಟ್ಟಿ, ಕರಬಸಯ್ಯ ದಂಡಿಗಿಮಠ ಸೇರಿದಂತೆ ಇತರರಿದ್ದರು.
ಸಂಸ್ಥೆಯ ಉಪಾಧ್ಯಕ್ಷರಾದ ಪಲ್ಲಾ ಲಕ್ಷ್ಮೀಕಾಂತರೆಡ್ಡಿಯವರು ತಾಯಿ ದಿ.ಪಲ್ಲಾ ವೆಂಕಟಮ್ಮ, ತಂದೆ ದಿ.ಪಲ್ಲಾ ಭೀಮರೆಡ್ಡಿ ಸ್ಮರಣಾರ್ಥ ಇಗಾಗಲೇ ಪ್ರೌಢ ಶಾಲೆಯ 10ನೇ ಹಾಗೂ ಪ.ಪೂ. ಕಾಲೇಜಿನ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ದ್ವೀತಿಯ ವರ್ಷದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಇಬ್ಬರು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ವಿತರಣೆ ಮಾಡಿದ್ದಾರೆ. ಈದೀಗ ಡಿ.ಎಲ್.ಇಡಿ ಪ್ರಶಿಕ್ಷಣಾರ್ಥಿಗಳಿಗೆ ವಿತರಣೆ ಮಾಡಿರುವುದು ಶಿಕ್ಷಣ ಹಾಗೂ ವಿದ್ಯಾರ್ಥಿಗಳ ಬಗಗೆಗಿನ ಅವರ ಕಾಳಜಿ ತಿಳಿಸುವಂತಿದೆ. ಇನ್ನೂ ಸೇವೆ ಮಾಡುವ ಶಕ್ತಿ ಅವರಲ್ಲಿ ಹೆಚ್ಚಾಗಲಿ.

                  ಕರಬಸಯ್ಯ ದಂಡಿಗಿಮಠ ಪ್ರಾಂಶುಪಾಲರು ಸೈದಾಪುರ