ತಂದೆ ತಾಯಿಗಳ ಕನಸುಗಳನ್ನು ನುಚ್ಚುನೂರು ಮಾಡಬೇಡಿ : ಶರಣ ಶಂಕರಲಿಂಗ ಮಹಾರಾಜರು

ಚಿಟಗುಪ್ಪ:ಫೆ.29: ಕೆಟ್ಟ ಚಟಗಳಿಗೆ ಬಲಿ ಆಗಬೇಡಿ ಎಂದು ಸೊಂತ ಶ್ರೀ ಶರಣ ಶಂಕರಲಿಂಗ ಆಶ್ರಮದ ಪರಮ ಪೂಜ್ಯ ಶ್ರೀ ಬಾಲಯೋಗಿ ಅಭಿನವ ಶರಣ ಶಂಕರಲಿಂಗ ಮಹಾರಾಜರು ಹೇಳಿದರು. ಪಟ್ಟಣದ ಶ್ರೀ ಮಾಕರ್ಂಡೇಶ್ವರ ದೇವಸ್ಥಾನದಲ್ಲಿ ಮಹಾಯೋಗಿ ಗುರುದೇವ ದತ್ತ ದಿಗಂಬರ ಮಾಣಿಕೇಶ್ವರರ ದಿವ್ಯ ರಥ ನಿರ್ಮಾಣದ ನಿಮಿತ್ಯ ಪರಮ ಪೂಜ್ಯ ಶ್ರೀ ಬಾಲಯೋಗಿ ಅಭಿನವ ಶರಣ ಶಂಕರಲಿಂಗ ಮಾಹಾರಾಜರ ದಿವ್ಯ ಸಾನಿಧ್ಯದಲ್ಲಿ ಫೆಬ್ರವರಿ 20 ರಿಂದ ಜರುಗುತ್ತಿರುವ ಮಹಾ ದಾಸೋಹಿ ಕಲ್ಬುರ್ಗಿ ಶರಣ ಬಸವೇಶ್ವರರ ಮಹಾ ಪುರಾಣ ಪ್ರವಚನ 9ನೇ ದಿನದ ನಿಮಿತ್ಯ ಬುಧವಾರ ಬೆಳಿಗ್ಗೆ 6 ಘಂಟೆಗೆ ಪಟ್ಟಣದ ಶ್ರೀ ಮಾಕರ್ಂಡೇಶ್ವರ ದೇವಸ್ಥಾನದಿಂದ ಪಾದಯಾತ್ರೆ ಪ್ರಾರಂಭಿಸಿ ಸೂರ್ಯ ನಾರಾಯಣ ದೇವಸ್ಥಾನ, ಬನಶಂಕರಿ ದೇವಸ್ಥಾನದ ಮೂಲಕ ಕುಂಬಿವಾಡ, ಬುತ್ತಾಳ್ಳಿ ಗಲ್ಲಿ, ಗಾಂಧಿ ವೃತ್ತ ಮಾರ್ಗದಿಂದ ಮಾಕರ್ಂಡೇಶ್ವರ ದೇವಸ್ಥಾನಕ್ಕೆ ಪಾದಯಾತ್ರೆ ತಲುಪಿತ್ತು, ಪಾದಯಾತ್ರೆಯಲ್ಲಿ ಮುತ್ತೈದಿಯರು ಕುಂಭ ಮೇಳವನ್ನು ತಲೆಯ ಮೇಲೆ ಹೊತ್ತಿಕೊಂಡು ಶ್ರೀಗಳ ಜೊತೆಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ನಂತರ ಶ್ರೀ ಬಾಲಯೋಗಿ ಅಭಿನವ ಶರಣ ಶಂಕರಲಿಂಗ ಮಹಾರಾಜರು ಮಾತನಾಡಿ ಈಗಿನ ಯುವಕರು ಕೆಟ್ಟ ಚಟಗಳಿಗೆ ಬಲಿಯಾಗುತ್ತಿದ್ದಾರೆ ಅವುಗಳಿಂದ ಮುಕ್ತರಾಗುವಂತೆ ಹಾಗೂ ಮನೆಯಲ್ಲಿರುವ ಸಮಸ್ಯೆಗಳನ್ನು ನಿವಾರಣೆ ಮಾಡುವ ಸಂಕಲ್ಪದೊಂದಿಗೆ ಪಾದಯಾತ್ರೆಯನ್ನು ಮಾಡಲಾಗಿದೆ, ಯುವಕರು ಚಟಕ್ಕೆ ಬಲಿಯಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುವುದರ ಜೊತೆಗೆ. ತಮ್ಮ ತಂದೆ ತಾಯಿಗಳ ಕನಸುಗಳನ್ನು ನುಚ್ಚುನೂರು ಮಾಡುತ್ತಿದ್ದಾರೆಂದು ಹೇಳುತ್ತಾ ಮಾತನಾಡಿದ ಅವರು. ಉತ್ತಮ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಯುವಕರ ಪಾತ್ರ ಬಹು ದೊಡ್ಡದು ಯುವಕರೇ ನಮ್ಮ ದೇಶದ ಉಜ್ವಲ ಭವಿಷ್ಯವನ್ನು ನಿರ್ಮಾಣ ಮಾಡುವ ಶಕ್ತಿ ನಿಮ್ಮ ಕೈಯಲ್ಲಿದೆ. ನಮ್ಮ ದೇಶದಲ್ಲಿ ಈಗಾಗಲೇ ಮಧುಮೇಹ ರೋಗಿಗಳ ಸಂಖ್ಯೆ ಹೆಚ್ಚಾಗಿದೆ ಮಧುಮೇಹ ರೋಗಿ ಮನೆಗೊಬ್ಬರಂತೆ ಇದ್ದಾರೆ. ಅದೇ ರೀತಿ ಪ್ರತಿಯೊಂದು ಮನೆಯಲ್ಲಿ ಒಬ್ಬರಾದರೂ ತಂಬಾಕು ಸೇವನೆಯನ್ನು ಮಾಡುತ್ತಿದ್ದಾರೆ. ಇದೇ ರೀತಿಯಲ್ಲಿ ಮುಂದುವರೆದರೆ ನಮ್ಮ ದೇಶದಲ್ಲಿ ಮಧುಮೇಹ ರೋಗಿಗಳ ಸಂಖ್ಯೆಗಳು ಹೆಚ್ಚಾದಂತೆ. ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚಾಗುತ್ತದೆ. ಆದುದರಿಂದ ಕೆಟ್ಟ ವ್ಯಸನಗಳ ಸೇವನೆಯನ್ನು ಇಂದೇ ಬಿಡಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಪುರಾಣಿಕ ಶರಣುಕುಮಾರ್ ಶಾಸ್ತ್ರಿ, ಷಣ್ಮುಖಯ್ಯಾ ಸ್ವಾಮಿ, ಮಲ್ಲಯ್ಯಾಸ್ವಾಮಿ, ಪ್ರಮುಖರಾದ ಮಲ್ಲಿಕಾರ್ಜುನ ಪಾಟೀಲ್, ವಿಜಯಕುಮಾರ್ ಬೊಮಣ್ಣಿ, ಗುಂಡು ರೆಡ್ಡಿ, ಮಲ್ಲಿಕಾರ್ಜುನ ರೆಡ್ಡಿ, ಮಡೇಪ್ಪ ಮ್ಯಾಕಲ್, ಚಂದು ಬೆಳಕೇರಾ, ಡಾ. ಎಸ್.ಎಂ ಭಕ್ತ ಕುಂಬಾರ, ಹಣಮಂತ ಕಣಜಿಕ್ಕರ್, ಗಿರೀಶ್, ಸೇರಿದಂತೆ ಸಾವಿರಾರು ಭಕ್ತಾದಿಗಳು ಇದ್ದರು.