ತಂದೆಯ ಶವ ಸಂಸ್ಕಾರಕ್ಕೆ ಹೂ ತರಲು ಹೋದ ಪುತ್ರ ಅಪಘಾತಕ್ಕೆ ಬಲಿ

ಉತ್ತರ ಕನ್ನಡ,ಮಾ.15-ತಂದೆಯ ಶವ ಸಂಸ್ಕಾರಕ್ಕೆ ಹೂ ತರಲು ಹೋಗಿದ್ದ ಪುತ್ರ ಸೇರಿ ಇಬ್ಬರು ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡದ ಜಿಲ್ಲೆಯ ಶಿರಸಿ ಪಟ್ಟಣದ ಎಸ್‍ಬಿಐ ಸರ್ಕಲ್ ಬಳಿ ಸಂಭವಿಸಿದೆ.
ಮೃತರನ್ನು ಶಿರಸಿಯ ಗಣೇಶ ನಗರದ ನಿವಾಸಿಗಳಾದ ರವಿಚಂದ್ರ ವಡ್ಡರ್ (34), ಸುನೀಲ ಇಂದೂರ (26) ಎಂದು ಗುರುತಿಸಲಾಗಿದೆ.
ತಂದೆಯ ಶವಸಂಸ್ಕಾರಕ್ಕೆಂದು ಹೂವು ತರಲು ತೆರಳಿದ್ದ ಮಗ ಮತ್ತು ಇನ್ನೊಬ್ಬ ಸಂಬಂಧಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ರವಿಚಂದ್ರ ತಂದೆ ಹನುಮಂತಪ್ಪ ಇಂದು ಮೃತಪಟ್ಟಿದ್ದು, ಅವರ ಶವಸಂಸ್ಕಾರಕ್ಕೆ ಹೂ ತರಲು ಇಬ್ಬರೂ ಮಾರುಕಟ್ಟೆಗೆ ತೆರಳುತ್ತಿದ್ದರು. ಈ ವೇಳೆ ಇನ್ನೊಂದು ರಸ್ತೆಯಿಂದ ಬಂದ ಬಸ್ಸು ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್‍ನಲ್ಲಿದ್ದ ಯುವಕರಿಬ್ಬರೂ ಬಸ್ಸು ಅಡಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 
ಆ ಮೂಲಕ ಕುಟುಂಬದಲ್ಲಿ ಮೂವರು ಸಾವಿಗೀಡಾಗಿದ್ದಾರೆ. ತಂದೆ, ಮಗನನ್ನು ಕಳೆದುಕೊಂಡ ಕುಟುಂಬದಲ್ಲಿ ಆಕ್ರಂದನ ಮುಗಿಲು‌ ಮುಟ್ಟಿದೆ. ಘಟನೆಗೆ ಸಂಬಂಧಿಸಿದಂತೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.