ತಂದೆಯ ಅಂತ್ಯಸಂಸ್ಕಾರದ ವೇಳೆ ಕುಸಿದುಬಿದ್ದು ಪುತ್ರ ಮೃತ್ಯು

ಪುತ್ತೂರು, ಜೂ.೩- ಕೊರೋನದಿಂದ ಮೃತಪಟ್ಟ ತಂದೆಯ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿದ್ದ ಅವರ ಪುತ್ರ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಬುಧವಾರ ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಬೈಲುಗುತ್ತು ಕೊಪ್ಪಳ ಎಂಬಲ್ಲಿ ನಡೆದಿದೆ.

ಪುಣಚ ಬೈಲುಗುತ್ತು ಕೊಪ್ಪಳ ನಿವಾಸಿ ಕೆಪಿಟಿ ನಿವೃತ್ತ ಪ್ರೊ. ಭುಜಂಗ ಶೆಟ್ಟಿ (85) ಅವರು ಕೋವಿಡ್‌ನಿಂದ ಮಂಗಳವಾರ ರಾತ್ರಿ ಮೃತಪಟ್ಟಿದ್ದರು. ಅವರ ಅಂತಿಮ ಸಂಸ್ಕಾರವು ಬುಧವಾರ ಬೈಲುಗುತ್ತು ಕೊಪ್ಪಳ ನಿವಾಸದಲ್ಲಿ ಕೋವಿಡ್ ನಿಯಮಾವಳಿ ಯೊಂದಿಗೆ ನಡೆಸಲಾಯಿತು. ಅಂತ್ಯ ಕ್ರಿಯೆಯಲ್ಲಿ ಭಾಗಿಯಾಗಿದ್ದ ಭುಜಂಗ ಶೆಟ್ಟಿಯ ಕಿರಿಯ ಪುತ್ರ ಆಸ್ಟ್ರೇಲಿಯಾದಲ್ಲಿ ಉದ್ಯೋಗದಲ್ಲಿರುವ ಶೈಲೇಶ್ ಶೆಟ್ಟಿ (44) ಕುಸಿದು ಬಿದ್ದಿದ್ದು, ಅವರನ್ನು ತಕ್ಷಣವೇ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆತರಲಾ ಗಿತ್ತು. ಆದರೆ ಆಸ್ಪತ್ರೆ ತಲುಪುವ ವೇಳೆಗಾಗಲೇ ಅವರು ಕೊನೆಯುಸಿರೆಳೆದಿದ್ದರು ಎಂದು ತಿಳಿದುಬಂದಿದೆ. ಮೃತ ಶೈಲೇಶ್‌ ಪತ್ನಿ  ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಡಿಪ್ಲೋಮಾ ಇನ್ ಮೆಕಾನಿಕಲ್ ಪದವಿ ಮಾಡಿರುವ ಶೈಲೇಶ್ ಹಲವು ವರ್ಷಗಳಿಂದ ಆಸ್ಟ್ರೇಲಿಯಾದಲ್ಲಿ ಉನ್ನತ ಉದ್ಯೋಗದಲ್ಲಿ ದ್ದರು. ಕಳೆದ ಎರಡು ತಿಂಗಳ ಹಿಂದೆಯಷ್ಟೇ ಊರಿಗೆ ಬಂದಿದ್ದು, ಪುತ್ತೂರು ನಗರದ ಹಾರಾಡಿ ಎಂಬಲ್ಲಿ ಬಾಡಿಗೆ ಮನೆಯಲ್ಲಿ ಪತ್ನಿ ಮಕ್ಕಳೊಂದಿಗೆ ವಾಸವಾಗಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.