ತಂದೆಯನ್ನು ಕೊಂದ ಮಕ್ಕಳ ಬಂಧನ

ಕಲಬುರಗಿ,ಮಾ.27-ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಅಷ್ಟಗಿ ಸೀಮಾಂತರದಲ್ಲಿ ನಡೆದ ಆಳಂದ ತಾಲ್ಲೂಕಿನ ನರೋಣಾ ಗ್ರಾಮದ ಬಟ್ಟೆ ವ್ಯಾಪಾರಿ ಓಂಕಾರ ಮಹಾಂತಪ್ಪ ಹನಶೆಟ್ಟಿ ಕೊಲೆ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೊಲೆಯದ ಓಂಕಾರ ಹನಶೆಟ್ಟಿ ಅವರ ಪುತ್ರರಾದ ಶರಣಬಸಪ್ಪಾ ಹನಶೆಟ್ಟಿ, ಇನ್ನೊಬ್ಬ ಮಗ ರವಿ ಹನಶೆಟ್ಟಿ ತಮ್ಮ ತಂದೆ ಕಿರಿಕಿರಿ ಮಾಡುತ್ತಿದ್ದುದ್ದರಿಂದ ಅವರ ಕೊಲೆಗೆ ಸ್ಕೆಚ್ ಹಾಕಿದ್ದರು. ಈ ಸಂಬಂಧ ತಮ್ಮ ಗೆಳೆಯರಾದ ಜೈ ಕರ್ನಾಟಕ ರಕ್ಷಣಾ ವೇದಿಕೆಯ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಅಮರ ತಂದೆ ಚಂದ್ರಕಾಂತ ಹಿಂದೊಡ್ಡಿ ಮತ್ತು ಆತನ ಗೆಳೆಯರಾದ ಹರೀಷ ಒಂಟಿ, ಪ್ರಲ್ಹಾದ ಬಂಬು ಬಜಾರ್ ಹಾಗೂ ಸುರೇಶ ಡೆಂಗಿ ಅವರಿಗೆ ಕೊಲೆ ಮಾಡಲು ತಿಳಿಸಿದ್ದರು. ಅದರಂತೆ ಅಮರ ಹಿಂದೊಡ್ಡಿ ತನ್ನ ಗೆಳೆಯರೊಂದಿಗೆ ಮಾ.22 ರಂದು ಸೈಯದ್ ಚಿಂಚೋಳಿ ಕ್ರಾಸ್ ದಿಂದ ನರೋಣಾ ರೋಡಿಗೆ ಹೋಗುವಾಗ ಅಷ್ಠಗಿ ಕ್ರಾಸ್ ಕ್ಕಿಂತ 1 ಕಿ.ಮೀ.ಮೊದಲೆ ಓಂಕಾರ ಹನಶೆಟ್ಟಿ ಅವರನ್ನು ತಡೆದು ಅವರನ್ನು ಆಟೋ ರೀಕ್ಷಾದಲ್ಲಿ ಅಷ್ಟಗಿ ಸೀಮಾಂತರದ ಬಿರಾದಾರ ಎಂಬುವವರ ಹೊಲದ ಬಂದಾರಿಯಲ್ಲಿ ಕರೆದುಕೊಂಡು ಹೋಗಿ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದರು.
ಈ ಸಂಬಂಧ ಕೊಲೆಯಾದ ಓಂಕಾರ ಹನಶೆಟ್ಟಿ ಅವರ ಮಗ ಶರಣಬಸವಪ್ಪಾ ಹನಶೆಟ್ಟಿಯೇ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದ. ಈ ದೂರಿನ ಅನ್ವಯ ನಗರ ಪೊಲೀಸ್ ಆಯುಕ್ತ ಎನ್.ಸತೀಷಕುಮಾರ, ಉಪ ಪೊಲೀಸ್ ಆಯುಕ್ತ ಡಿ.ಕಿಶೋರಬಾಬು, ಸಂಚಾರಿ ಮತ್ತು ಅಪರಾಧ ವಿಭಾಗದ ಉಪ ಪೊಲೀಸ್ ಆಯುಕ್ತ ಶ್ರೀಕಾಂತ ಕಟ್ಟಿಮನಿ, ಸಿ ಉಪ ವಿಭಾಗದ ಎಸಿಪಿ ಜೆ.ಹೆಚ್.ಇನಾಮದಾರ ಅವರ ಮಾರ್ಗದರ್ಶನದಲ್ಲಿ ಗ್ರಾಮೀಣ ಪೊಲೀಸ್ ಠಾಣೆ ಇನ್ಸಪೆಕ್ಟರ್ ಬಾಸು ಚವ್ಹಾಣ ಅವರ ನೇತೃತ್ವದಲ್ಲಿ, ಪಿಎಸ್ಐ ಕವಿತಾ ಚವ್ಹಾಣ, ಸಿಬ್ಬಂದಿಗಳಾದ ಎ.ಎಸ್.ಐ ಮಾಳಪ್ಪಾ ಮೇತ್ರೆ, ಜೈರಾಮ ರಾಠೋಡ್, ಎ.ಎಸ್.ಐ ಎಂ.ಎ.ಬೇಗ, ಅಂಬಾಜಿ ಧನೆಕರ್, ಮಲ್ಲಿಕಾರ್ಜುನ, ಶಿವಶರಣಪ್ಪ ಮಂಗಲಗಿ, ಮೊಯಿಜೊದ್ದಿನ್, ಪ್ರಕಾಶ, ಪ್ರಕಾಶ ಬಾಗೆವಾಡಿ, ನಾಗೇಂದ್ರ ಸಗರ, ಚನ್ನಬಸಯ್ಯಾ ಮಠಪತಿ, ಶರಣು ನರಗಾ, ಅನೀಲ ರಾಠೋಡ್, ಭವಾನಿಸಿಂಗ್, ಪ್ರಶಾಂತ, ಶಿವರಾಜ ಸಿಂಧೆ ಅವರು ತನಿಖೆ ನಡೆಸಿ ಆರೋಪಿಗಳಾದ ಶರಣಬಸವಪ್ಪಾ ಹನಶೆಟ್ಟಿ, ರವಿ ಹನಶೆಟ್ಟಿ, ಅಮರ ಹಿಂದೊಡ್ಡಿ, ಹರಿಷ್ ಒಂಟಿ, ಪ್ರಲ್ಹಾದ ಬಂಬು ಬಜಾಹರ ಹಾಗೂ ಸುರೇಶ ಡೆಂಗಿ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.