ತಂದೆ,ತಾಯಿ ಕನಸು ನನಸಾಗಿಸಿ-ಕೃಷ್ಣಮೂರ್ತಿ

ಕೋಲಾರ,ಏ.೨: ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣದಿಂದ ವಂಚಿತರಾದ ಹಲವಾರು ಪೋಷಕರು ತಮ್ಮ ಮಕ್ಕಳ ಮೂಲಕ ಅಕ್ಷರದ ಬೆಳಕು ಕಾಣುವ ತವಕದಲ್ಲಿದ್ದಾರೆ, ಅವರ ಕನಸು ನನಸು ಮಾಡಲು ಶ್ರದ್ಧೆಯಿಂದ ಓದಿ, ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕೇ ಸಿಗುತ್ತದೆ ಎಂದು ಡಿಡಿಪಿಐ ಕೃಷ್ಣಮೂರ್ತಿ ಕರೆ ನೀಡಿದರು.
ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿ, ಮಕ್ಕಳ ಪ್ರಗತಿ ಪರಿಶೀಲಿಸಿದ ಅವರು, ಹಳ್ಳಿಗಾಡಿನಲ್ಲಿ ಅನೇಕ ಪೋಷಕರು ಶಿಕ್ಷಣದಿಂದ ವಂಚನೆಗೊಳಗಾಗಿ ಕೂಲಿ, ಕೃಷಿ ಕಾರ್ಯದಲ್ಲಿ ತೊಡಗಿ ಜೀವನ ನಡೆಸುತ್ತಿದ್ದಾರೆ ಎಂದರು.
ಆ ಪೋಷಕರು ತಮ್ಮ ಮಕ್ಕಳು ತಮ್ಮಂತೆ ಕೂಲಿಗಾರರಾಗುವುದು ಬೇಡ ಎಂಬ ಆಶಯದೊಂದಿಗೆ ತಮ್ಮ ಕಷ್ಟದ ಬದುಕಿನ ನಡುವೆಯೂ ನಿಮ್ಮನ್ನು ಶಾಲೆಗೆ ಕಳುಹಿಸುತ್ತಿದ್ದಾರೆ, ಅವರ ಆಶಯಗಳಿಗೆ ಧಕ್ಕೆ ಬಾರದಂತೆ ಚೆನ್ನಾಗಿ ಓದಿ ಹೆಚ್ಚು ಅಂಕ ಗಳಿಸುವ ಮೂಲಕ ಸಾಧಕರಾಗಿ ಅವರ ಋಣ ತೀರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಗ್ರಾಮೀಣ ಮಕ್ಕಳೆಂಬ ಕೀಳಿರಿಮೆ ಬೇಡ, ಈ ದೇಶದಲ್ಲಿ ಅತಿ ಹೆಚ್ಚು ಸಾಧನೆ ಮಾಡಿರುವುದು ಗ್ರಾಮೀಣರೇ, ಪ್ರತಿ ಬಾರಿ ಫಲಿತಾಂಶದಲ್ಲೂ ಗ್ರಾಮೀಣರೇ ಮೇಲುಗೈ ಸಾಧಿಸುವುದು, ಇದರ ನೆನಪು ನಿಮಗೆ ಇರಲಿ ಎಂದರು.
ಎಸ್ಸೆಸ್ಸೆಲ್ಸಿ ನಿಮ್ಮ ಜೀವನದ ಅತಿ ಮುಖ್ಯ ಘಟ್ಟವಾಗಿದ್ದು, ಇಲ್ಲಿ ನೀವು ದಾರಿ ತಪ್ಪಿದರೆ ಇಡೀ ಜೀವನದಲ್ಲಿ ಸೋಲು ಕಾಣುತ್ತೀರಿ, ಆದ್ದರಿಂದ ಕಲಿಕೆಗೆ ಒತ್ತು ನೀಡಿ, ನಿಮ್ಮ ಕೀಟಲೆ, ಗಲಾಟೆ ಇವೆಲ್ಲವನ್ನು ಪಕ್ಕಕ್ಕಿಟ್ಟು ನಿಮ್ಮ ಗುರಿ ಪರೀಕ್ಷೆ ಎಂದು ಸಿದ್ದರಾಗಿ ಎಂದು ತಿಳಿಸಿದರು.ಇಲಾಖೆ ಅಧ್ಯಾಯವಾರು ಪ್ರಶ್ನೆಪತ್ರಿಕೆ ನೀಡಿದೆ, ಪ್ರಶ್ನೋತ್ತರದೊಂದಿಗೆ ನನ್ನನ್ನೊಮ್ಮೆ ಗಮನಿಸಿ ಕಿರುಹೊತ್ತಿಗೆ ನೀಡುತ್ತಿದೆ, ಇದೆಲ್ಲವನ್ನು ಬಳಸಿಕೊಳ್ಳಿ ಎಂದರು.
ವಿದ್ಯಾರ್ಥಿಗಳಿಗೆ ಆರೋಗ್ಯ ಕಾಪಾಡಿಕೊಳ್ಳುವುದು ಅತಿ ಮುಖ್ಯ, ಕೋವಿಡ್ ಸಂಕಷ್ಟದಲ್ಲಿ ನೀವು ಅತಿ ಹೆಚ್ಚು ಎಚ್ಚರಿಕೆ ವಹಿಸಬೇಕು, ಮಾಸ್ಕ್ ಧರಿಸುವುದನ್ನು ಮರೆಯದಿರಿ, ಸಾಮಾಜಿಕ ಅಂತರ ಕಾಪಾಡಿ ಎಂದು ಸಲಹೆ ನೀಡಿದರು.
ಕೆಲವು ಮಕ್ಕಳು ಬಿಸಿಯೂಟ ಬೇಕು ಎಂದು ಮಾಡಿದ ಮನವಿಗೆ ಸ್ಪಂದಿಸಿದ ಅವರು, ಸರ್ಕಾರದ ನಿರ್ಧಾರದ ನಂತರ ಕ್ರಮವಹಿಸುತ್ತೇವೆ, ಬಿಸಿಯೂಟದಿಂದ ನೀವು ಒಟ್ಟಾಗಿ ಕುಳಿತು ಊಟ ಮಾಡುವುದು, ಸಾಮಾಜಿಕ ಅಂತರ ಕಾಪಾಡಲು ಧಕ್ಕೆ ಬರುವುದರಿಂದ ಸೋಂಕು ಹರಡುವ ಆತಂಕದೊಂದಿಗೆ ಬಿಸಿಯೂಟ ರದ್ದಾಗಿದೆ ಎಂದರು.
ಎಸ್ಸೆಸ್ಸೆಲ್ಸಿ ಮೊದಲ ಪೂರ್ವಸಿದ್ದತಾ ಪರೀಕ್ಷೆಯಲ್ಲಿ ಪಡೆದಿರುವ ಅಂಕಗಳ ವಿಶ್ಲೇಷಣೆ ನಡೆಸಿದ ಡಿಡಿಪಿಐ ಅವರು, ನಿಮ್ಮ ಸಾಧನೆ ಸಾಲದು, ಇನ್ನು ೮೦ ದಿನ ಮಾತ್ರ ಪರೀಕ್ಷೆಗೆ ಸಮಯವಿದೆ, ಈ ಅವಧಿಯಲ್ಲಿ ನೀವು ಪಡುವ ಶ್ರಮ ನಿಮ್ಮ ಬದುಕಿನ ದಿಕ್ಕನ್ನೇ ಬದಲಿಸುತ್ತದೆ, ಶ್ರದ್ದೆಯಿಂದ ಓದಿ ಎಂದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಸಿ.ಎನ್.ಪ್ರದೀಪ್‌ಕುಮಾರ್, ಶಿಕ್ಷಕರಾದ ಸಚ್ಚಿದಾನಂದಮೂರ್ತಿ, ಶ್ವೇತಾ, ಭವಾನಿ ಸುಗುಣಾ, ವೆಂಕಟರೆಡ್ಡಿ, ಲೀಲಾ,ಫರೀದಾ, ಶ್ರೀನಿವಾಸಲು, ದಾಕ್ಷಾಯಿಣಿ, ಡಿ.ಚಂದ್ರಶೇಖರ್ ಮತ್ತಿತರರಿದ್ದರು.