ತಂತ್ರಜ್ಞಾನ ಪರಿಚಯಕ್ಕೆ ಪ್ರದರ್ಶನ ಸಹಕಾರಿ: ಔರಾದ್‍ಕರ್

ಬೀದರ್:ಜೂ.13: ವಸ್ತು ಪ್ರದರ್ಶನಗಳು ಜನಸಾಮಾನ್ಯರಿಗೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಪರಿಚಯಿಸಲು ಸಹಕಾರಿಯಾಗುತ್ತವೆ ಎಂದು ಕೆಎಟಿಯ ಆಡಳಿತ ಸದಸ್ಯ ರಾಘವೇಂದ್ರ ಔರಾದ್‍ಕರ್ ಅಭಿಪ್ರಾಯಪಟ್ಟರು.

ಬೀದರ್ ಕ್ರೆಡೈ ಹಾಗೂ ಯು.ಎಸ್. ಕಮ್ಯುನಿಕೇಷನ್ಸ್ ವತಿಯಿಂದ ಇಲ್ಲಿಯ ಕೇಂದ್ರ ಬಸ್ ನಿಲ್ದಾಣ ಎದುರಿನ ಝೀರಾ ಫಂಕ್ಷನ್ ಹಾಲ್‍ನಲ್ಲಿ ಹಮ್ಮಿಕೊಳ್ಳಲಾಗಿದ್ದ ಮೂರು ದಿನಗಳ ‘ಬಿಲ್ಡ್ ಟೆಕ್-2023’ ವಸ್ತು ಪ್ರದರ್ಶನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಕಟ್ಟಡ ಹಾಗೂ ಮನೆ ನಿರ್ಮಿಸುವ ದಿಸೆಯಲ್ಲಿ ನೆರವಾಗಲು ಬೀದರ್‍ನಲ್ಲಿ ಬೃಹತ್ ನಗರಗಳ ಮಾದರಿಯಲ್ಲಿ ಪ್ರದರ್ಶನ ಏರ್ಪಡಿಸಿರುವುದು ಶ್ಲಾಘನೀಯ ಎಂದು ಹೇಳಿದರು.

ನಗರದ ಅಭಿವೃದ್ಧಿಗೆ ಪೂರಕ ಚಟುವಟಿಕೆಗಳಿಗೆ ಪ್ರಾಧಿಕಾರದ ಸಹಕಾರ ಸದಾ ಇರಲಿದೆ ಎಂದು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಅಭಯಕುಮಾರ ತಿಳಿಸಿದರು.

ಮನೆ ನಿರ್ಮಾಣ ಪ್ರತಿಯೊಬ್ಬರ ಕನಸು ಆಗಿರುತ್ತದೆ. ಹೀಗಾಗಿ ಈ ನಿಟ್ಟಿನಲ್ಲಿ ಜನರಿಗೆ ಅನುಕೂಲ ಮಾಡಿಕೊಡುವ ಹೆಚ್ಚು ಹೆಚ್ಚು ಪ್ರದರ್ಶನಗಳು ಬೀದರ್‍ನಲ್ಲಿ ಆಯೋಜನೆಯಾಗಬೇಕು ಎಂದು ಹಿರಿಯ ಪತ್ರಕರ್ತ ಸದಾನಂದ ಜೋಶಿ ಹೇಳಿದರು.

ಮೂರು ದಿನಗಳ ಪ್ರದರ್ಶನ ನಿರೀಕ್ಷೆಗಿಂತ ಹೆಚ್ಚು ಯಶಸ್ಸು ಕಂಡಿದೆ. ಮನೆ ನಿರ್ಮಾಣದ ಕನಸು ಹೊತ್ತವರಿಗೆ ದೇಶದ ವಿವಿಧ ಭಾಗಗಳ ಪ್ರತಿಷ್ಠಿತ ಕಂಪನಿಗಳ ಅತ್ಯಾಧುನಿಕ ತಂತ್ರಜ್ಞಾನ ಪರಿಚಯಿಸಿದ ತೃಪ್ತಿ ನಮಗಿದೆ ಎಂದು ಕ್ರೆಡೈ ಅಧ್ಯಕ್ಷ ರವಿ ಮೂಲಗೆ ತಿಳಿಸಿದರು.

ಬರುವ ದಿನಗಳಲ್ಲಿ ಕ್ರೆಡೈ ಸಹಯೋಗದೊಂದಿಗೆ ಬೀದರ್‍ನಲ್ಲಿ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜಿಸಲಾಗಿದೆ ಎಂದು ಯು.ಎಸ್. ಕಮ್ಯುನಿಕೇಷನ್ಸ್‍ನ ಉಮಾಪತಿ ಹೇಳಿದರು.

ಶ್ರೀ ಓಂ ಸ್ಟೀಲ್ಸ್, ಜಲ ಬಾಥ್ ಫಿಟ್ಟಿಂಗ್ಸ್ ಹಾಗೂ ನಿಶಾ ಎಲೆಕ್ಟ್ರಿಕಲ್ ಸ್ವಿಚ್ಸ್ ಮಳಿಗೆಗಳಿಗೆ ಉತ್ತಮ ಮಳಿಗೆ ಪುರಸ್ಕಾರ ನೀಡಲಾಯಿತು. ಪ್ರಾಯೋಜಕತ್ವ ವಹಿಸಿಕೊಂಡಿದ್ದ ಐಕಾನ್ ಸ್ಟೀಲ್ ಸೇರಿದಂತೆ ಎಲ್ಲ ಮಳಿಗೆಗಳ ಮಾಲೀಕರಿಗೆ ಸತ್ಕರಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಚೆನ್ನೈನ ನಾಗಾರ್ಜುನ ಕನ್‍ಸ್ಟ್ರಕ್ಷನ್ಸ್ ಪ್ರಧಾನ ವ್ಯವಸ್ಥಾಪಕ ವಿಜಯಕುಮಾರ ಚೌಧರಿ, ಯು.ಎಸ್. ಕಮ್ಯುನಿಕೇಷನ್ಸ್‍ನ ಕಲ್ಮೇಶ್, ಕ್ರೆಡೈ ಕಾರ್ಯದರ್ಶಿ ಅನಿಲ್ ಖೇಣಿ, ವೀರಶೆಟ್ಟಿ ಮಣಗೆ, ಅಮಯ ಸಿಂದೋಲ್, ಆಕಾಶ ಕರ್ಪೂರ, ಕಾರ್ತಿಕ ರೆಡ್ಡಿ, ಶ್ರೀನಿವಾಸ್ ಸಾಳೆ ಮೊದಲಾದವರು ಇದ್ದರು. ಕ್ರೆಡೈ ಜಂಟಿ ಕಾರ್ಯದರ್ಶಿ ಹಾವಶೆಟ್ಟಿ ಪಾಟೀಲ ವಂದಿಸಿದರು.