ತಂತ್ರಜ್ಞಾನವನ್ನು ದೈನಂದಿನ ಆಡಳಿತಕ್ಕೆ ತಂದ ಅಧಿಕಾರಿ: ಎಸ್.ಎನ್.ರುದ್ರೇಶ್


ಸಂಜೆವಾಣಿ ವಾರ್ತೆ
ಬಳ್ಳಾರಿ, ಆ.27: ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಎಸ್.ಎನ್. ರುದ್ರೇಶ್ ಅವರಿಗೆ ವರ್ಗಾವಣೆಯಾಗಿರುವ ಪಾಲಿಕೆ ಆಯುಕ್ತ ಸನ್ಮಾನ ಸ್ವೀಕರಿಸಿದ ರುದ್ರೇಶ್ ಬೀಳ್ಕೊಡುಗೆ ಸಮಾರಂಭವನ್ನು ನಿನ್ನೆ ಹಮ್ಮಿಕೊಂಡಿತ್ತು.
ಇಲ್ಲಿಯ ಜನರು ಉತ್ತಮರು. ಅಭಿವೃದ್ಧಿಗೆ ಸಹಕಾರ ನೀಡುವವರು. ಇಲ್ಲಿಯ ಜನರೊಂದಿಗೆ ನಾನು, ಕೆಲಸ ಮಾಡಲು ಪ್ರಾರಂಭಿಸಿದಾಗ ನನ್ನನ್ನು ಗುರುತಿಸಿ ಪ್ರೋತ್ಸಾಹಿಸಿ ಸಮಸ್ಯೆಯ ಪರಿಹಾರಕ್ಕೆ ಬೆಂಬಲ ನೀಡಿದ್ದಾರೆ ಎಂದರು.
ಪಾಲಿಕೆ ವ್ಯಾಪ್ತಿಯಲ್ಲಿ ಒಳಚರಂಡಿ, ಕುಡಿಯುವ ನೀರಿನ ಸಮಸ್ಯೆ, ನೈರ್ಮಲ್ಯ ಮತ್ತು ರಸ್ತೆಗಳ ಸಮಸ್ಯೆ ಪರಿಹಾರಕ್ಕೆ ಪಾಲಿಕೆಯ ಅಧಿಕಾರಿಗಳು – ಸಿಬ್ಬಂದಿಯ ಜೊತೆಗೂಡಿ ಸಾಕಷ್ಟು ಶ್ರಮಿಸಿರುವೆ.
ಮಳೆಗಾಲದಲ್ಲಿ ಇಲ್ಲಿಯ ಅನೇಕ ಪ್ರದೇಶಗಳಲ್ಲಿ ನೀರು ನುಗ್ಗುತ್ತದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಸ್ಲಂಗಳಿರುವ ಪಾಲಿಕೆ ಬಳ್ಳಾರಿ. ಈ ಪಾಲಿಕೆಯ ಪ್ರತಿಯೊಂದು ವಾರ್ಡ್ನ ಸಮಗ್ರ ವೀಡಿಯೋ ಚಿತ್ರೀಕರಣ, ಟೋಪೋಶೀಟ್ ಮತ್ತು ಜಿಪಿಎಸ್ ಲೊಕೇಶನ್ ರೆಕಾರ್ಡ್ ಮಾಡಿಸಿ ತಂತ್ರಜ್ಞಾನವನ್ನು ದೈನಂದಿನ ಚಟುವಟಿಕೆಗಳಲ್ಲಿ ಅಳವಡಿಸಲಾಗಿದೆ.
ಲೋಕಾಯುಕ್ತದಲ್ಲಿದ್ದ ದೂರಿಗೆ ಸ್ಪಂದಿಸಿ ಮೋಕಾ ರಸ್ತೆಯ ದುರಸ್ತಿ, ಅಂದ್ರಾಳ್ ರಸ್ತೆ, ಸಂಗನ ಕಲ್ಲು ರಸ್ತೆ, ಮೋತಿ ರಸ್ತೆ, ಕೋಟೆ ಮಲ್ಲೇಶ್ವರ ದೇವಸ್ಥಾನದ ಸಮೀಪದ ರಸ್ತೆ ದುರಸ್ತಿ ಸೇರಿ ಅನೇಕ ರಸ್ತೆಗಳನ್ನು ಸವಾಲಾಗಿ ತೆಗೆದುಕೊಂಡು ದುರಸ್ತಿ ಮಾಡಲಾಗಿದೆ. ರಸ್ತೆಗಳ ದುರಸ್ತಿ – ನಿರ್ವಹಣೆಗಾಗಿ ದೆಹಲಿ ಮೂಲದ ಸಂಸ್ಥೆ ನನಗೆ ಪ್ರಶಸ್ತಿ ಘೋಷಿಸಿದೆ. ನಗರದ ವ್ಯವಸ್ಥೆಯನ್ನು ಸುಧಾರಿಸಲಿಕ್ಕಾಗಿ ಇರುವ ಕಡಿಮೆ ಸಿಬ್ಬಂದಿಯ ಮೂಲಕ ಸಾಕಷ್ಟು ಉತ್ತಮ ಕೆಲಸವನ್ನು ಮಾಡಲಾಗಿದೆ.
ಸರ್ಕಾರಿ ನೌಕರರಿಗೆ ವರ್ಗಾವಣೆ, ಬಡ್ತಿ ಇವುಗಳೆಲ್ಲಾ ಸಾಮಾನ್ಯ. ನಾನು ಇಲ್ಲಿಗೆ ವರ್ಗವಾಗಿ ಬಂದಿದ್ದೆ, ಇಲ್ಲಿಂದ ವರ್ಗಾವಣೆ ಆಗಿರುವೆ. ಒಳ್ಳೆಯ ಅನುಭವ ಮತ್ತು ಒಳ್ಳೆಯ ಜನರ ಸಂಪರ್ಕ, ಪ್ರೀತಿ-ವಿಶ್ವಾಸ; ಅಭಿಮಾನಗಳನ್ನು ಪಡೆದುಕೊಂಡಿರುವೆ. ಸಂತೋಷದಿಂದಲೇ ವರ್ಗಾವಣೆಯಾಗುತ್ತಿರುವೆ ಎಂದರು.
ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಸಿ. ಶ್ರೀನಿವಾಸರಾವ್, ಸಾಕಷ್ಟು ಶ್ರಮಪಟ್ಟು ನಿರಂತರ ಶ್ರಮ, ದುಡಿಮೆ ಮತ್ತು ಸತತ ವೈಫಲ್ಯಗಳಿಂದ ಸರ್ಕಾರಿ ವ್ಯವಸ್ಥೆಗೆ ಬಂದಿರುವ ಕೆ.ಎ.ಎಸ್. ಅಧಿಕಾರಿ ಎಸ್.ಎನ್. ರುದ್ರೇಶ್ ಅವರು ಬಳ್ಳಾರಿ ಮಹಾನಗರ ಪಾಲಿಕೆಯ ಆಯುಕ್ತರಾಗಿ ಜನಪರವಾಗಿ ಕೆಲಸ ಮಾಡಿ ಜನಪ್ರಿಯರಾಗಿದ್ದಾರೆ. ರುದ್ರೇಶ್ ಅವರ ಸೇವೆ ಇನ್ನೂ ಒಂದಿಷ್ಟು ಕಾಲ ಜನರಿಗಾಗಿ ಅಗತ್ಯವಿತ್ತು. ಆದರೆ, ಸರ್ಕಾರ ಇವರನ್ನು ವರ್ಗಾವಣೆ ಮಾಡಿರುವುದು ಬೇಸರದ ಸಂಗತಿ ಎಂದರು.
ಸಂಸ್ಥೆಯ ಗೌರವ ಕಾರ್ಯದರ್ಶಿ ಯಶವಂತ್ ರಾಜ್ ನಾಗಿರೆಡ್ಡಿ, ಪಾಲಿಕೆಯ ಆಯುಕ್ತರಾಗಿ ಸಾಕಷ್ಟು ಉತ್ತಮವಾಗಿ ಕರ್ತವ್ಯವನ್ನು ನಿರ್ವಹಿಸಿ, ಅತ್ಯಲ್ಪ ಅವಧಿಯಲ್ಲಿ ಜನಪ್ರಿಯವಾಗಿ – ಉತ್ತಮವಾಗಿ ಕೆಲಸ ನಿರ್ವಹಿಸಿದ್ದ ಎಸ್.ಎನ್. ರುದ್ರೇಶ್ ಅವರು ಜನಪರವಾದ ಅಧಿಕಾರಿ. ಬಳ್ಳಾರಿ ಮಹಾನಗರದ ವ್ಯಾಪ್ತಿಯಲ್ಲಿಯ ವ್ಯವಸ್ಥೆಯನ್ನು ದೊಡ್ಡಮಟ್ಟದಲ್ಲಿ ಸುಧಾರಿಸುವ ನಿಟ್ಟಿನಲ್ಲಿ ಸಾಕಷ್ಟು ಶ್ರಮಿಸಿದ್ದ, ವಿಶ್ರಾಂತಿಯೇ ಇಲ್ಲದಂತೆ ದುಡಿದಿದ್ದ ಎಸ್.ಎನ್. ರುದ್ರೇಶ್ ಇನ್ನಷ್ಟು ಕಾಲ ಪಾಲಿಕೆಯಲ್ಲಿ ಆಯುಕ್ತರಾಗಿ ಸೇವೆ ಸಲ್ಲಿಸಬೇಕಿತ್ತು ಎಂದರು.
ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಬಿ. ಮಹಾರುದ್ರಗೌಡ, ಎ. ಮಂಜುನಾಥ, ಕೆ. ರಮೇಶ (ಬುಜ್ಜಿ), ಜಂಟಿ ಕಾರ್ಯದರ್ಶಿಗಳಾದ,ಎಸ್. ದೊಡ್ಡನಗೌಡ, ಸೊಂತ ಗಿರಿಧರ, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ವಿಶೇಷ ಆಹ್ವಾನಿತರು, ಸಮನ್ವಯ ಸಮಿತಿ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.