ತಂತ್ರಜ್ಞಾನದ ನೆರವಿನಿಂದಲೇ ಜಾನಪದ ಮಹತ್ವ ವೃದ್ಧಿ ಸಾಧ್ಯ


ಸಂಜೆವಾಣಿ ವಾರ್ತೆ
ಶಿವಮೊಗ್ಗ.ಅ.24: ಮೊಬೈಲ್, ಟಿವಿಗಳ ಬಳಕೆಯಿಂದ ಜಾನಪದ ಸಂಸ್ಕೃತಿ ಮರೆಯಾಗುತ್ತಿದ್ದು, ಇಂದಿನ ಯುವಜನತೆ ಆಧುನಿಕ ತಂತ್ರಜ್ಞಾನದ ನೆರವಿನಿಂದ ಜಾನಪದ ಸಂಸ್ಕೃತಿ ಪರಂಪರೆಯ ಶ್ರೇಷ್ಠತೆಯನ್ನು ಹೆಚ್ಚಿಸಬೇಕಿದೆ ಎಂದು ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ, ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ. ಎಂ.ವೆಂಕಟೇಶ್ ಹೇಳಿದರು.ಶಿವಮೊಗ್ಗ ನಗರದ ಆಚಾರ್ಯ ತುಳಸಿ ರಾಷ್ಟ್ರೀಯಯ ವಾಣಿಜ್ಯ ಕಾಲೇಜಿನ ಚಂದನ ಸಭಾಂಗಣದಲ್ಲಿ ಎಟಿಎನ್‌ಸಿಸಿ ಕಾಲೇಜಿನ ಐಕ್ಯೂಎಸಿ, ಎನ್‌ಎಸ್‌ಎಸ್ ವಿಭಾಗ ಹಾಗೂ ಜಿಲ್ಲಾ ಕನ್ನಡ ಜಾನಪದ ಪರಿಷತ್ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಜಾನಪದ ಗೀತ ಗಾಯನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.ಜಾನಪದ ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳೆಸುವ ಸಂಪೂರ್ಣ ಸಾಮಾರ್ಥ್ಯ ಇಂದಿನ ಯುವ ಸಮೂಹಕ್ಕಿದೆ.ಜಾನಪದ ಸಂಸ್ಕೃತಿ ಪರಂಪರೆಗಳನ್ನು ಯ್ಯೂಟೂಬ್ ಸೇರಿದಂತೆ ಹೊಸ ಹೊಸ ಸಾಮಾಜಿಕ ಜಾಲತಾಣಗಳಲ್ಲಿ ದಾಖಲಿಸಬೇಕು. ಯುವಜನರಿಗೆ ಜಾನಪದ ಶ್ರೇಷ್ಠತೆಯನ್ನು ವಿಶ್ವ ಸಮೂಹಕ್ಕೆ ತಲುಪಿಸಬಹುದಾಗಿದೆ ಎಂದು ತಿಳಿಸಿದರು.ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್ ಮಾತನಾಡಿ, ಪಾಶ್ಚಿಮಾತ್ಯ ಸಂಸ್ಕೃತಿ ಅಬ್ಬರದಲ್ಲಿ ಪ್ರಾದೇಶಿಕ ಮೌಲ್ಯ ಕಣ್ಮರೆಯಾಗುತ್ತಿದೆ. ಜಾನಪದ ಗೀತೆಗಳು ಬದುಕಿನ ಮೌಲ್ಯಗಳನ್ನು ಕಲಿಸಿಕೊಡುತ್ತದೆ. ಮಳೆಗಾಲ, ಬರಗಾಲ, ಮನೆ ಕಾರ್ಯಕ್ರಮ ಹೀಗೆ ಪ್ರತಿಯೊಂದು ಸನ್ನಿವೇಶಕ್ಕೂ ಜಾನಪದ ಹಾಡುಗಳಿವೆ. ಅದರ ಬಗ್ಗೆ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಪ್ರೊ. ಕೆ.ಎಂ.ನಾಗರಾಜು ಮಾತನಾಡಿ, ಪ್ರತಿ ವರ್ಷ ಜಾನಪದ ಗೀತ ಗಾಯನ ಸ್ಪರ್ಧೆ ಹಮ್ಮಿಕೊಳ್ಳುತ್ತಿದ್ದು, ಜಾನಪದ ಕಲೆ, ಗೀತೆಗಳ ಮಹತ್ವ ಅರಿವು ಮೂಡಿಸುವುದು ಪ್ರಮುಖ ಆಶಯ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.ಎಟಿಎನ್‌ಸಿಸಿ ಕಾಲೇಜಿನ ಪ್ರಾಚಾರ್ಯೆ ಪ್ರೊ. ಮಮತಾ ಪಿ.ಆರ್. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶಿಯ ಕಲೆಗಳ ಪ್ರತಿಯೊಂದು ಪ್ರಕಾರಗಳನ್ನು ಹೆಚ್ಚು ಹೆಚ್ಚು ಅಧ್ಯಯನ ನಡೆಸಬೇಕು. ಮುಂದಿನ ಪೀಳಿಗೆಗೆ ಜಾನಪದ ಸಂಸ್ಕೃತಿಯನ್ನು ಪರಿಚಯಿಸಬೇಕು ಎಂದರು. ಜಾನಪದ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಪ್ರೊ. ಪ್ರವೀಣ್ ಬಿ.ಎನ್., ಪ್ರೊ. ಶ್ರೀಲಲಿತಾ, ಪ್ರೊ. ರವಿಕುಮಾರ.ಜಿ., ಡಿವಿಎಸ್ ಕಾಲೇಜಿನ ಶಿವರುದ್ರಪ್ಪ, ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿಗಳು, ಸಿಬ್ಬಂದಿ, ಸ್ಪರ್ಧೆಯ ತೀರ್ಪುಗಾರರು, ಸ್ವಯಂ ಸೇವಕರು, ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು