ತಂತ್ರಜ್ಞಾನದಿಂದ ಭ್ರಷ್ಟಾಚಾರ ನಿಗ್ರಹ

ಟೆಕ್ ಶೃಂಗಕ್ಕೆ ಚಾಲನೆ
ಬೆಂಗಳೂರು,ನ.೧೬- ತಂತ್ರಜ್ಞಾನದಿಂದ ಭ್ರಷ್ಟಾಚಾರಕ್ಕೆ ಅಂಕುಶ ಹಾಕಲು ಸಾಧ್ಯ, ತಂತ್ರಜ್ಞಾನದ ಮೂಲಕ ದೇಶದಲ್ಲಿ ಸಮಾನತೆ ಮತ್ತು ಸಬಲೀಕರಣವನ್ನು ಸಾಧಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದರು.
ಬೆಂಗಳೂರು ತಂತ್ರಜ್ಞಾನ ಶೃಂಗದ ರಜತೋತ್ಸವ ಸಮಾವೇಶವನ್ನು ವರ್ಚುವಲ್ ಮೂಲಕ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರಮೋದಿ ಅವರು ತಂತ್ರಜ್ಞಾನವನ್ನು ಬಳಸಿ ಭಾರತದಲ್ಲಿ ಭ್ರಷ್ಟಾಚಾರಕ್ಕೆ ತೆರೆ ಎಳೆಯುವ ಕೆಲಸ ನಡೆದಿದೆ. ನೇರ ನಗದು ವರ್ಗಾವಣೆ, ಜನ್‌ಧನ್, ಆಧಾರ್, ಇ-ಮಾರ್ಕೆಟ್ ಎಲ್ಲದರಲ್ಲೂ ಭಾರತ ತಂತ್ರಜ್ಞಾನ ಸಮರ್ಥ ಬಳಕೆಯನ್ನು ಯಶಸ್ವಿಯಾಗಿ ಮಾಡಿದೆ ಎಂದರು.ಕೋವಿಡ್ ಸಂದರ್ಭದಲ್ಲಿ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ತಂತ್ರಜ್ಞಾನ ಪ್ರಮುಖಪಾತ್ರ ವಹಿಸಿತ್ತು ಎಂದರು. ತಂತ್ರಜ್ಞಾನವನ್ನು ಬಳಸಿಕೊಂಡು ಸರ್ಕಾರ ಹಲವು ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡುತ್ತಿದೆ.ತಂತ್ರಜ್ಞಾನದ ಅಳವಡಿಕೆ ಮೂಲಕ ೨೦೦ ಕೋಟಿಗೂ ಹೆಚ್ಚು ಕೊರೊನಾ ಲಸಿಕೆ ನೀಡಿದ್ದೇವೆ. ಹಾಗೆಯೇ ೨೦೦ ದಶಲಕ್ಷ ಕುಟುಂಬಗಳ ೬೦೦ ದಶಲಕ್ಷ ಜನರಿಗೆ ಆಯುಷ್ಮಾನ್ ಭಾರತ್ ಯೋಜನೆಯ ಮೂಲಕ ವೈದ್ಯಕೀಯ ಚಿಕಿತ್ಸೆ ಮಾಡಿದ್ದೇವೆ. ನಮ್ಮಲ್ಲಿ ಸಿಗುತ್ತಿರುವಷ್ಟು ಅಗ್ಗದ ದರದಲ್ಲಿ ಎಲ್ಲೂ ಸಿಗುತ್ತಿಲ್ಲ. ಒಟ್ಟಿನಲ್ಲಿ ತಂತ್ರಜ್ಞಾನದ ಮೂಲಕ ಭಾರತವು ಬೇರಾವ ದೇಶಕ್ಕೂ ಸಾಧ್ಯವಾಗದಂತಹ ಸಾಧನೆಗಳನ್ನು ಮಾಡುತ್ತಿದೆ ಎಂದರು.
ಮೂಲಸೌಲಭ್ಯ ೧೦೦ ಟ್ರಿಲಿಯನ್ ಡಾಲರ್ ಹೂಡಿಕೆ
ಭಾರತದಲ್ಲಿ ಮೂಲಸೌಲಭ್ಯಾವೃದ್ಧಿಗೆ ಮುಂಬರುವ ದಿನಗಳಲ್ಲಿ ೧೦೦ ಟ್ರಿಲಿಯನ್ ಡಾಲರ್‌ನಷ್ಟು ಅಗಾಧ ಮೊತ್ತವನ್ನು ಹೂಡಲಾಗುವುದು ಎಂದು ಹೇಳಿದರು.ದೇಶದಲ್ಲಿ ಬಂಡವಾಳ ಹೂಡಿಕೆದಾರರ ಪಾಲಿಗೆ ಹಿಂದಿನ ಕೆಂಪುಪಟ್ಟಿಯ ಸಮಸ್ಯೆ ಕೊನೆಗೊಂಡಿದೆ. ಈಗ ಹೂಡಿಕೆದಾರರಿಗೆ ರತ್ನಗಂಬಳಿಯ ಸ್ವಾಗತ ಇದೆ ಎಂದರು.ಹೂಡಿಕೆದಾರರ ನಂಬಿಕೆ ಮತ್ತು ದೇಶದಲ್ಲಿರುವ ತಂತ್ರಜ್ಞಾನದ ಶಕ್ತಿ ಎರಡೂ ಸೇರಿದರೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ. ತಂತ್ರಜ್ಞಾನ ಸಣ್ಣಪುಟ್ಟ ವ್ಯಾಪಾರಿಗಳಿಗೂ ಅನುಕೂವಾಗಲಿದ್ದು, ದೊಡ್ಡ ಗ್ರಾಹರನ್ನೂ ಸೃಷ್ಟಿಸಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿಯವರು ಟೆಕ್ ಶೃಂಗಕ್ಕೆ ದೆಹಲಿಯಲ್ಲಿಂದು ವರ್ಚುವಲ್ ಮೂಲಕ ಚಾಲನೆ ನೀಡಿದರು.

ಮೊಬೈಲ್ ವ್ಯಾಪಕ ಬಳಕೆಯಿಂದ ಪ್ರಪಂಚವೇ ಬೆರಗಿನಿಂದ ನೋಡುತ್ತಿರುವ ಡಿಜಿಟಲ್ ಆರ್ಥಿಕತೆ ದೇಶದಲ್ಲಿ ರೂಪುಗೊಂಡಿದೆ. ಈಗ ಗ್ರಾಮೀಣ ಭಾಗಗಳಲ್ಲೂ ಬ್ರಾಡ್‌ಬಾಂಡ್ ಕ್ರಾಂತಿ ನಡೆಯುತ್ತಿದೆ ಎಂದರು.ಸ್ವಾಮಿಥ್ಯ ಯೋಜನೆಯಡಿ ಭೂಮಿಯನ್ನು ಡ್ರೋಣ್ ಸರ್ವೆ ನಡೆಸಿ ಜನರಿಗೆ ಪ್ರಾಪರ್ಟಿ ಕಾರ್ಡ್‌ನ್ನು ನೀಡಲಾಗಿದೆ ಎಂದರು.ಜಾಗತಿಕ ಆವಿಷ್ಕಾರ ಇಂಡೆಕ್ಸ್‌ನಲ್ಲಿ ಭಾರತ ೪೧ನೇ ಸ್ಥಾನದಲ್ಲಿದೆ. ಭಾರತ ವಿಶ್ವದ ೩ನೇ ಅತೀ ದೊಡ್ಡ ಸ್ಟಾರ್ಟಪ್ ಕೇಂದ್ರವಾಗಿದೆ ಎಂದರು.ಭಾರತದ ಆವಿಷ್ಕಾರ ವಲಯದಲ್ಲಿ ಬೆಂಗಳೂರು ನಂ. ೧ ಆಗಿದೆ ಎಂದ ಅವರು, ಬೆಂಗಳೂರು ತಂತ್ರಜ್ಞಾನದ ತವರು, ನೂರಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಕಂಪನಿಗಳ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು ಭಾರತದಲ್ಲಿದೆ ಎಂದರು.
ಹೆಲ್ತ್‌ಟೆಕ್, ಫಿನ್‌ಟೆಕ್, ಯಜುಟೆಕ್ ಸೇರಿದಂತೆ ಎಲ್ಲ ರಂಗಗಳಲ್ಲೂ ಭಾರತೀಯರು ಜಾಗತಿಕ ಮಟ್ಟದಲ್ಲಿ ಮುನ್ನಡೆಸುತ್ತಿದ್ದಾರೆ. ಭಾರತದಲ್ಲಿ ೮೧ ಸಾವಿರ ನವೋದ್ಯಮಗಳಿದ್ದು, ಯುನಿಕಾರ್ನ್‌ಗಳಲ್ಲಿ ಪ್ರಪಂಚದಲ್ಲಿ ೩ನೇ ದೊಡ್ಡ ಹಬ್ ಆಗಿದೆ ಎಂದರು.
ಪ್ರಧಾನಿ ನರೇಂದ್ರಮೋದಿ ಅವರು ವರ್ಚುವಲ್ ಮೂಲಕ ಉದ್ಘಾಟಿಸಿದ ಬೆಂಗಳೂರು ತಂತ್ರಜ್ಞಾನ ಸಮಾವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಐಟಿ-ಬಿಟಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್ ಅಶ್ವತ್ಥ ನಾರಾಯಣ, ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ರಾಜ್ಯಸರ್ಕಾರದ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ, ಸಂಯುಕ್ತ ಅರಬ್ ಸಂಸ್ಥಾನದ ತಂತ್ರಜ್ಞಾನ ಸಚಿವ ಓಮರ್‌ಬಿನ್ ಸುಲ್ತಾನ್ ಅಲ್ ಒಲಾಮ, ಆಸ್ಟ್ರೇಲಿಯಾದ ವಿದೇಶಾಂಗ ಖಾತೆ ಸಹಾಯಕ ಸಚಿವ ಟಿಮ್‌ವ್ಯಾಟ್ಸ್, ಪಿನ್‌ಲ್ಯಾಂಡ್‌ನ ವಿಜ್ಞಾನ ಸಚಿವ ಪೆಟ್ರಿ ಹಾನ್ಕೊನೆನ್, ಉದ್ಯಮಿಗಳಾದ ಕ್ರಿಸ್ ಗೋಪಾಲಕೃಷ್ಣನ್, ಕಿರಣ್ ಮಜುಂದಾರ್ ಶಾ, ಪ್ರಶಾಂತ್ ಪ್ರಕಾಶ್, ಐಟಿ-ಬಿಟಿ ಎಸಿಎಸ್ ರಮಣರೆಡ್ಡಿ, ನಿರ್ದೇಶಕಿ ಮೀನಾ ನಾಗರಾಜ್ ಸೇರಿದಂತೆ ಹಲವರು ಉಪಸ್ಥಿರಿದ್ದರು.

ಬೆಂಗಳೂರನ್ನು ಮೆಚ್ಚಿದ ಮೋದಿ
ಬೆಂಗಳೂರು ತಂತ್ರಜ್ಞಾನ ಶೃಂಗದ ರಜತೋತ್ಸವ ಸಮಾವೇಶವನ್ನು ವರ್ಚುವಲ್ ಮೂಲಕ ಉದ್ಘಾಟಿಸಿದ ಪ್ರಧಾನಿ ಮೋದಿ ಅವರು ಎಲ್ಲರಿಗೂ ಕರ್ನಾಟಕಕ್ಕೆ ಸ್ವಾಗತ ಎಂದು ಕನ್ನಡದಲ್ಲೇ ಮಾತು ಆರಂಭಿಸಿ ಬೆಂಗಳೂರಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬೆಂಗಳೂರು ಎಲ್ಲರನ್ನೂ ಒಳಗೊಳ್ಳುವ ನಾವಿನ್ಯತೆಯ ಸಂಸ್ಕೃತಿಯ ನಗರವಾಗಿದೆ. ಬೆಂಗಳೂರು ತಂತ್ರಜ್ಞಾನದ ತವರು, ಭಾರತ ಸ್ಟಾರ್ಟಪ್ ರಾಜಧಾನಿ, ಬೆಂಗಳೂರು ಸಂಶೋಧನೆಯ ತಾಣವಾಗಿದ್ದು, ಇಲ್ಲಿ ತಂತ್ರಜ್ಞಾನ ಕ್ರಾಂತಿ ನಡೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಜಾಗತಿಕ ನಾವಿನ್ಯತಾ ಸೂಚ್ಯಂಕದಲ್ಲಿ ಬೆಂಗಳೂರು ನಗರ ಪ್ರಥಮ ಸ್ಥಾನದಲ್ಲಿದೆ. ತಂತ್ರಜ್ಞಾನ ನಗರಿಯಿಂದ ನಮ್ಮೆಲ್ಲರ ಭವಿಷ್ಯ ಮತ್ತಷ್ಟು ಉಜ್ವಲವಾಗಲಿದೆ ಎಂದೂ ಮೋದಿ ಹೇಳಿದರು.
ಮೂರು ದಿನ ತಂತ್ರಜ್ಞಾನ ಸಮಾವೇಶ
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಚಾಲನೆ ನೀಡಿರುವ ಬೆಂಗಳೂರು ತಂತ್ರಜ್ಞಾನ ಶೃಂಗ ಇಂದಿನಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆಯಲಿದ್ದು, ೩೦ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ೩೫೦ಕ್ಕೂ ಹೆಚ್ಚು ಅಂತರಾಷ್ಟ್ರೀಯ ತಂತ್ರಜ್ಞಾನ ಪರಿಣಿತರು, ೫ಸಾವಿರಕ್ಕೂ ಹೆಚ್ಚು ಉದ್ಯಮಿಗಳು ಈ ಶೃಂಗದಲ್ಲಿ ಭಾಗಿಯಾಗಿದ್ದು, ದೇಶ-ವಿದೇಶದ ೫೫೦ಕ್ಕೂ ಹೆಚ್ಚು ಪ್ರದರ್ಶಕರು ಈ ಸಮಾವೇಶದಲ್ಲಿ ಪಾಲ್ಗೊಂಡು ತಂತ್ರಜ್ಞಾನದ ಹೊಸ ಹೊಸ ಮಜಲುಗಳನ್ನು ಪ್ರದರ್ಶಿಸಿದ್ದಾರೆ.
ಕೃತಕ ಬುದ್ಧಿಮತ್ತೆ, ಬಿಗ್ ಡೇಟಾ, ಸೆಮಿಕಂಡೆಕ್ಟರ್, ಮಷಿನ್ ೫ಜಿ, ರೋಬೊಟಿಕ್ಸ್, ಪಿನ್‌ಟೆಕ್, ಮೆಡಿಟೆಕ್, ಸ್ಪೇಸ್‌ಟೆಕ್, ಜೀನ್ ಎಡಿಟಿಂಗ್, ಜೈವಿಕ ಇಂಧನ ಸುಸ್ಥಿರತೆ, ಇ-ಸಂಚಾರ ಹೀಗೆ ವಿವಿಧ ಕ್ಷೇತ್ರಗಳ ತಾಂತ್ರಿಕ ಬೆಳವಣಿಗೆ ಬಗ್ಗೆಯೂ ಸಂವಾದ ನಡೆಯಲಿದೆ.