ತಂತ್ರಜ್ಞಾನದಿಂದ ಜ್ಞಾನ ವೃದ್ಧಿಸಿಕೊಳ್ಳಿ: ಸಚಿವ ಬೊಮ್ಮಾಯಿ

ಹಾವೇರಿ:ಜೂ.24: ವಿದ್ಯಾರ್ಥಿಗಳು ಆಧುನಿಕ ತಂತ್ರಜ್ಞಾನದ ಬಳಕೆ ಮಾಡಿಕೊಂಡು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಗಾಂಧಿಪುರದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಸ್ಮಾರ್ಟ್ ಕರ್ನಾಟಕ 2021-22 ಯೋಜನೆಯ ಡಿಜಟಲ್ ಕಲಿಕೆಯ ಅಂಗವಾಗಿ ಸ್ಥಾಪಿಸಲಾದ ನೂತನ ಸ್ಮಾರ್ಟ್ ಕ್ಲಾಸ್ ಕೊಠಡಿ ಉದ್ಘಾಟಿಸಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್ ಪಿಸಿ ವಿತರಣೆಮಾಡಿ ಅವರು ಮಾತನಾಡಿದರು.
ಈ ಮೊದಲು ಡಿಜಿಟಲ್ ಜ್ಞಾನ, ಬಳಕೆ ಹಾಗೂ ಉಪಯೋಗ ಉಳ್ಳವರಿಗೆ ಮಾತ್ರ ಲಭಿಸುತಿತ್ತು. ಈಗ ಸರ್ಕಾರ ಡಿಜಿಟಲ್ ತಂತ್ರಜ್ಞಾನವನ್ನು ಎಲ್ಲ ವರ್ಗದ ಜನರಿಗೆ ತಲುಪಿಸುತ್ತಿದೆ. ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಂಡು ಎಲ್ಲ ರೀತಿಯ ಸಾಮಾನ್ಯ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.
ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಟ್ಯಾಬ್ ನೀಡಲಾಗುವುದು ಹಾಗೂ 2,500 ಸ್ಮಾರ್ಟ್ ಕ್ಲಾಸ್ ನೀಡಲಾಗಿದೆ. ಮುಂಬರುವ ದಿನಗಳಲ್ಲಿ 5000 ಸ್ಮಾರ್ಟ್ ಕ್ಲಾಸ್ ನೀಡಲಾಗುವುದು. ಮುಂದಿನ ಎರಡು ವರ್ಷದಲ್ಲಿ ಸಂಪೂರ್ಣ ಡಿಜಿಟಲೀಕಣ ಶಿಕ್ಷಣವನ್ನು ನೀಡುವ ಉದ್ದೇಶವನ್ನು ಹೊಂದಲಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಶ್ಯಾಮಪ್ರಸಾದ್ ಮುಖರ್ಜಿ ಅವರ ಪುಣ್ಯತಿಥಿ ನಿಮಿತ್ಯ ಕಾಲೇಜು ಆವರಣದಲ್ಲಿ ಸಸಿ ನೆಟ್ಟು ನೀರುಣಿಸಿದರು.
ಶಾಸಕರು, ರಾಜ್ಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಆಯೋಗದ ಅಧ್ಯಕ್ಷ ನೆಹರು ಓಲೇಕಾರ, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಹಮ್ಮದ ರೋಷನ್, ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಸಿದ್ದರಾಜ ಕಲಕೋಟಿ , ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಪ್ರಾಚಾರ್ಯ ಬಿ.ಟಿ.ಲಮಾಣಿ ಇತರರು ಉಪಸ್ಥಿತರಿದ್ದರು.