ತಂತ್ರಜ್ಞಾನದಿಂದ ಗುಬ್ಬಿಗಳ ಸಂತತಿ ನಾಶ: ಉಡಕೇರಿ


ಧಾರವಾಡ ಮಾ.24: ಮುಂದುವರೆದ ತಂತ್ರಜ್ಞಾನದಿಂದ, ಮೊಬಾಯಿಲ್ ಫೋನಗಳಿಂದ ಹೊರಹೊಮ್ಮುವ ವಿಕಿರಣಗಳು ಮತ್ತು ಕಾರ್ಖಾನೆಗಳು, ವಾಹನಗಳು ಹೊರಸೂಸುವ ವಿಷಕಾರಿ ಅಂಶಗಳಿಂದ ಗುಬ್ಬಿಗಳು ನಾಶವಾಗುತ್ತಿವೆ ಎಂದು ಕ.ವಿ.ವ.ಸಂಘದ ಪ್ರಧಾನ ಕಾರ್ಯದರ್ಶಿಗಳು ಹಾಗೂ ನ್ಯಾಯವಾದಿಗಳಾದ ಪ್ರಕಾಶ ಎಸ್. ಉಡಿಕೇರಿ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು, ಧಾರವಾಡ ಜಿಲ್ಲಾ ಅಭಿಯಾನ ಪರಿಸರ ಸಮಿತಿ ಹಾಗೂ ಅಂಜುಮನ್ ಇಸ್ಲಾಂ, ಧಾರವಾಡ ಸಹಕಾರದೊಂದಿಗೆ, ಅಂಜುಮನ್ ಕಾಲೇಜಿನ ಸಭಾಭವನದಲ್ಲಿ ವಿಶ್ವ ಗುಬ್ಬಿ ದಿನಾಚರಣೆ' ಅಂಗವಾಗಿ ಆಯೋಜಿಸಿದ್ದಗುಬ್ಬಿಯೇ ಮರಳಿ ಬಾ ಗೂಡಿಗೆ’ ಉಪನ್ಯಾಸ ಹಾಗೂ ಪರಿಸರ ಗೀತೆಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಗುಬ್ಬಿಗೂ ನಮಗೂ ಏನು ಸಂಬಂಧ ? ನಾವೇಕೆ ಗುಬ್ಬಿಯ ದಿನವನ್ನಾಚರಿಸಬೇಕು ? ನಮ್ಮ ಸಾಮಾಜಿಕ ಕಳಕಳಿ, ಪರಿಸರ ಕಳಕಳಿ ಭೂಮಿಯ ಮೇಲೆ ಹುಟ್ಟಿದಂತ ಪ್ರತಿಯೊಬ್ಬ ಮನುಷ್ಯನು ಮಾಡಲೇಬೇಕಾದ ಕರ್ತವ್ಯ. ನಾವೆಲ್ಲರೂ ಗುಬ್ಬಿಯಿಂದ ಕಲಿಯಬೇಕಾದ ಮೊದಲನೆ ಪಾಠವೆಂದರೆ ಸಂಘ ಜೀವಿಯಾಗಿರುವುದು. ಇಂದು ಗುಬ್ಬಿಯ ಅವನತಿಗೆ ಕಾರಣ ಮನುಷ್ಯನೆ ಎಂದರು.
ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಮಗುವು ತನ್ನದೆ ಆದಂತಹ ಒಂದು ವೈಶಿಷ್ಟತೆಯನ್ನು ಹೊಂದಿರುತ್ತದೆ. ಆ ವೈಶಿಷ್ಟತೆಯನ್ನು ಗುರುತು ಮಾಡಿಕೊಡಲು ಮಕ್ಕಳಿಗೆ ಒಳ್ಳೆಯ ಗುರುಗಳು ಬೇಕು. ಪ್ರತಿಯೊಂದು ಮಕ್ಕಳು ಕನಸು ಕಾಣಬೇಕು. ಒಳ್ಳೆಯ ಕನಸುಗಳನ್ನು ಕಾಣುವಂತೆ ಅವರ ತಂದೆ, ತಾಯಿಗಳು ಅವರನ್ನು ಪ್ರೋತ್ಸಾಹಿಸಬೇಕು. ಹಾಗೆ ಪ್ರೊತ್ಸಾಹ ನೀಡಿದಾಗ ಅಂಥ ಮಗು ಸಮಾಜದಲ್ಲಿ ಒಂದು ಶಕ್ತಿಯಾಗಿ, ಗಣ್ಯವ್ಯಕ್ತಿಯಾಗಿ ಹೊರಹೊಮ್ಮುತ್ತಾನೆ ಎಂದರು.
ಅತಿಥಿ ಉಪನ್ಯಾಸಕರಾಗಿ ಆಗಮಿಸಿದ ಪರಿಸರವಾದಿಗಳು ಹಾಗೂ ಪಕ್ಷಿಪ್ರೇಮಿಗಳಾದ ಪ್ರಕಾಶ ಗೌಡರ ಮಾತನಾಡಿ, ಗುಬ್ಬಿಗಳು ಪ್ರಕೃತಿಯ ಪ್ರಮುಖ ಕೊಂಡಿ, ಗುಬ್ಬಿಗಳಿಲ್ಲದೆ ಪ್ರಕೃತಿ ಶುದ್ಧವಾಗುವುದಿಲ್ಲ, ಗುಬ್ಬಿಗಳು ಮೂರು ಪ್ರಮುಖ ಪಾತ್ರಗಳನ್ನು ಪ್ರಕೃತಿಯಲ್ಲಿ ನಿರ್ವಹಿಸುತ್ತವೆ. ಪ್ರಮುಖವಾಗಿ ನಿಸರ್ಗದಲ್ಲಿ ಬೀಜ ಪ್ರಸರಣ ಕೆಲಸಗಳನ್ನು ಗುಬ್ಬಿಗಳು ಮಾಡುತ್ತವೆ. ಉದಾಹರಣೆಗೆ ಕಾಡಿನಲ್ಲಿರುವ ನೂರಾರು ತರದ ಗಿಡಗಳು, ಆಲದ ಮರ, ಬೇವಿನ ಮರ ಹೀಗೆ ನೂರಾರು ಗಿಡದ ಬೀಜಗಳನ್ನು ಗುಬ್ಬಿಗಳು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕೊಂಡ್ಯೊಯುತ್ತವೆ, ಇದರಿಂದ ಗಿಡಗಳು ಹುಟ್ಟುತ್ತವೆ. ಈ ಗಿಡಗಳನ್ನು ಯಾವ ಮನುಷ್ಯನೂ ಬೀಜವನ್ನು ಬಿತ್ತಿ ಬೆಳೆಸುವುದಿಲ್ಲ. ಈ ಕ್ರಿಯೆಯನ್ನು ಗುಬ್ಬಿಗಳೇ ಮಾಡುತ್ತವೆ. ಕೀಟ ನಿಯಂತ್ರಣವನ್ನೂ ಮಾಡುತ್ತವೆ. ಬೆಳೆಗಳನ್ನು ನಾಶ ಮಾಡುವ ಸಣ್ಣ, ಸಣ್ಣ ಜೀವರಾಶಿಗಳನ್ನು, ವಿಷಜಂತುಗಳನ್ನು ಗುಬ್ಬಿಗಳು ತಿನ್ನುತ್ತವೆ. ಇದರಿಂದ ಬೆಳೆಗಳ ನಾಶ ಆಗುವುದನ್ನು ಗುಬ್ಬಿಗಳೆ ತಡೆದಂತಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಂಜುಮನ್ ಇಸ್ಲಾಂ ಸಂಸ್ಥೆಯ ಕಾರ್ಯದರ್ಶಿ ನಜೀರ ಮನಿಯಾರ ಮಾತನಾಡಿ, ವಿದ್ಯಾವರ್ಧಕ ಸಂಘವು ಕನ್ನಡದ ಗುಡಿ. ಇಲ್ಲಿ ಕನ್ನಡ ಸಾಹಿತ್ಯ, ಸಂಗೀತ, ಕಲೆ, ಸಂಸ್ಕøತಿ, ಪರಂಪರೆಯನ್ನು ಪೂಜಿಸಲಾಗುತ್ತದೆ. ಒಂದು ಸಂಸ್ಥೆಯ ಆಯುಷ್ಯ ಹೆಚ್ಚಾದಂತೆ ಅದರ ಬೇರುಗಳು ಗಟ್ಟಿಯಾಗುತ್ತವೆ. ಹೀಗೆ ವಿದ್ಯಾವರ್ಧಕ ಸಂಘಕ್ಕೆ 130 ವರ್ಷ ಕನ್ನಡದ ಸೇವೆಯನ್ನು ಸಲ್ಲಿಸುತ್ತಾ ತನ್ನ ಬೇರನ್ನು ಹೆಮ್ಮರವಾಗಿಸಿಕೊಂಡಿದೆ ಎಂದರು.
ವೇದಿಕೆ ಮೇಲೆ ಮುಖ್ಯ ಅತಿಥಿಗಳಾದಂತ ಗುಬ್ಬಿ ಸಂರಕ್ಷಕರಾದ ಆರ್. ಜಿ. ತಿಮ್ಮಾಪುರ ಹಾಗೂ ಧಾರವಾಡ ಜಿಲ್ಲಾ ಅಭಿಯಾನ ಸಮಿತಿ ಅಧ್ಯಕ್ಷರಾದ ಶ್ರೀಮತಿ ಜಯಶ್ರೀ ಗೌಳಿಯವರ ಹಾಗೂ ಅಂಜುಮನ್ ಕಾಲೇಜಿನ ಪ್ರಾಚಾರ್ಯರಾದ ಡಾ. ಜೆ. ಎ. ಜಾಗೀರದಾರ ಉಪಸ್ಥಿತರಿದ್ದರು. ಶ್ರೀಮತಿ ವಸಂತ ಲಕ್ಷ್ಮಿ ಎಸ್. ಹೊನ್ನಿಗನೂರ ಇವರು ಪರಿಸರ ಗೀತೆಗಳನ್ನು ಹಾಡಿದರು. ಇವರಿಗೆ ಸುರೇಶ ನಿಡಗುಂದಿ ತಬಲಾ ಹಾಗೂ ಮಹಮ್ಮದಶಫಿ ನೂಲಕರ ಹಾರ್ಮೋನಿಯಂ ಸಾಥ್ ನೀಡಿದರು.
ಕಾರ್ಯಕಾರಿ ಸಮಿತಿ ಸದಸ್ಯರಾದ ಶಿವಾನಂದ ಭಾವಿಕಟ್ಟಿಯವರು ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕರಾದ ಸತೀಶ ತುರಮರಿ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ ಸಮಾಜ ಸೇವಕಿ ರೇಖಾ ಮೋರೆ, ಅಂಜುಮನ್ ಸಂಸ್ಥೆಯ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.