ತಂತ್ರಜ್ಞಾನಗಳನ್ನು ರೈತರಿಗೆ ತಲುಪಿಸಿ ವಿಜ್ಞಾನಿಗಳಿಗೆ ಡಾ. ಎಂ.ಬಿ.ಚೆಟ್ಟಿ ಕರೆ

ಧಾರವಾಡ ಮೇ.27-ಕೃಷಿಯಲ್ಲಿ ಕಡಿಮೆ ಖರ್ಚು ಮಾಡಿ ಅಧಿಕ ಆದಾಯ ತರುವ ನಿಟ್ಟಿನಲ್ಲಿ ತಂತ್ರಜ್ಞಾನಗಳನ್ನು ರೈತರಿಗೆ ತಲುಪಿಸುವಲ್ಲಿ ಶ್ರಮವಹಿಸಲು ಕುಲಪತಿ ಡಾ. ಎಂ.ಬಿ.ಚೆಟ್ಟಿಯವರು ಕೃಷಿ ವಿಜ್ಞಾನಿಗಳಿಗೆ ಕರೆ ನೀಡಿದರು. ಅವರು ಆನ್‍ಲೈನ್ ಮುಖಾಂತರ ನಡೆಯುವ ಕೃಷಿ ವಿಜ್ಞಾನ ಕೇಂದ್ರಗಳ ವಾರ್ಷಿಕ ಕ್ರಿಯಾ ಯೋಜನೆ ತಯಾರಿಕಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ರೈತರು ಬೆಳೆ ಉತ್ಪಾದನೆಯಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅದರಲ್ಲಿ ಪ್ರಮುಖವಾಗಿ ಕಳೆಗಳನ್ನು ಕಡಿಮೆ ಖರ್ಚಿನಲ್ಲಿ ಹತೋಟಿ ಮಾಡುವ ತಂತ್ರಜ್ಞಾನ ತಿಳಿಸುವ ಹಾಗೂ ಕೃಷಿ ಸಲಕರಣೆಗಳನ್ನು ಅನೇಕ ಕೃಷಿ ಕಾರ್ಯಗಳಿಗೆ ಉಪಯೋಗಿಸಲು ಎಲ್ಲ ವಿಧದ ಪ್ರಯತ್ನ ಮಾಡಬೇಕೆಂದು ವಿನಂತಿಸಿಕೊಂಡರು. ರೈತರ ಆದಾಯವನ್ನು ದ್ವಿಗುಣಗೊಳಿಸುವಲ್ಲಿ ಹೆಚ್ಚಿನ ಆದ್ಯತೆ ಕೊಡಲು ತಿಳಿಸಿದರಲ್ಲದೇ ಆಹಾರ ಸಂಸ್ಕರಣೆ ತಂತ್ರಜ್ಞಾನ ಅಭಿವೃದ್ಧಿ ಹಾಗೂ ಉದ್ಯಮಶೀಲತೆ ಬಗ್ಗೆ ಹೆಚ್ಚು ಪ್ರಾಶಸ್ತ್ಯ ನೀಡಲು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬೆಂಗಳೂರಿನ ಕೃಷಿ ತಂತ್ರಜ್ಞಾನಗಳ ಅನ್ವಯಿಕ ಸಂಸ್ಥೆ (ಅಟಾರಿ) ನಿರ್ದೇಶಕರಾದ ಡಾ. ವಿ.ವೆಂಕಟಸುಬ್ರಮಣಿಯನ್ ಮಾತನಾಡಿ, ಕೋವಿಡ್ ಕಠಿಣ ಹಾಗೂ ವಿಷಮ ಪರಿಸ್ಥಿತಿಯಲ್ಲೂ ಕೃಷಿಯೊಂದೇ ಮುಂದುವರೆದಿರುವ ಚಟುವಟಿಕೆಯಾಗಿದ್ದು, ರೈತರು ಆಹಾರ ಉತ್ಪಾದನೆ, ಮಾನವನ ಆರೋಗ್ಯ ಕಾಪಾಡುತ್ತಿದ್ದು, ಅವರನ್ನು ಸ್ವಾವಲಂಬಿಯನ್ನಾಗಿ ಮಾಡಲು ತಂತ್ರಜ್ಞಾನಗಳನ್ನು ರೈತರ ಬಳಿಗೆ ಒಯ್ದು ಆತ್ಮ ನಿರ್ಭರ ಕೃಷಿ ಬಗ್ಗೆ ಒತ್ತು ನೀಡಲು ಕರೆ ನೀಡಿದರು. ಕೋವಿಡ್-19ರ ಈ ವಿಷಮ ಪರಿಸ್ಥಿತಿಯಲ್ಲಿ ರೈತರು ಸಹಜ ಇಳುವರಿ ಪಡೆದರೂ ಉತ್ತಮ ಫಲಿತಾಂಶವೆಂದು ತಿಳಿಸಿದರು.

ವಿಸ್ತರಣಾ ನಿರ್ದೇಶಕ ಡಾ. ರಮೇಶ ಬಾಬು ಅವರು ಕೃಷಿ ವಿಜ್ಞಾನ ಕೇಂದ್ರದವರು ಕೋವಿಡ್-19 ವಿಷಮ ಪರಿಸ್ಥಿತಿಯಲ್ಲೂ ರೈತರ ಸೇವೆಯಲ್ಲಿ ಬಹು ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ಇನ್ನೂ ಹೆಚ್ಚಿನ ರೈತರ ತಾಂತ್ರಿಕ ತೊಂದರೆಗಳಿಗೆ ಸ್ಪಂದಿಸಲು ಹಾಗೂ ಅವರನ್ನು ತಲುಪಲು ಸರಣಿರೂಪದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆನ್‍ಲೈನ್ ಕಾರ್ಯಕ್ರಮಗಳನ್ನು ರೂಪಿಸಲು ಸಲಹೆ ನೀಡಿದರು. ಮುಂಗಾರು ಹಂಗಾಮಿಗಾಗಿ ರೈತರ ಹೊಲದಲ್ಲಿ ತೆಗೆದುಕೊಳ್ಳಬಹುದಾದ ಪ್ರಾತ್ಯಕ್ಷಿಕೆಗಳನ್ನು ಕೈಗೊಳ್ಳುವಲ್ಲಿ ಈ ಕ್ರಿಯಾ ಯೋಜನೆ ಅತೀ ಮುಖ್ಯ ಪಾತ್ರ ವಹಿಸುತ್ತದೆ. ಕೃಷಿ ವಿಶ್ವವಿದ್ಯಾಲಯ ಧಾರವಾಡವು ಕುಲಪತಿ ಡಾ. ಎಂ.ಬಿ.ಚೆಟ್ಟಿಯವರ ನೇತೃತ್ವದಲ್ಲಿ ಕೋವಿಡ್-19ರ ವಿµಮ ಪರಿಸ್ಥಿತಿಯಲ್ಲೂ ರೈತರ ಆಶೋತ್ತರಗಳಿಗೆ ಸ್ಪಂದಿಸುತ್ತಿರುವುದಕ್ಕೆ ಇದು ಒಂದು ಉತ್ತಮ ನಿದರ್ಶನವಾಗಿದೆ.

ನೋಡಲ್ ಅಧಿಕಾರಿ (ಕೆವ್ಹಿಕೆ) ಡಾ. ಶ್ರೀಪಾದ ಕುಲಕರ್ಣಿ ಈ ಕಾರ್ಯಕ್ರಮವನ್ನು ಆಯೋಜಿಸಿ, ನಿರ್ವಹಣೆ ಮಾಡಿದರು. ವಿಜಯಪುರ ಜಿಲ್ಲೆಯ ಸಹ ವಿಸ್ತರಣಾ ನಿರ್ದೇಶಕ ಡಾ. ಆರ್.ಬಿ.ಬೆಳ್ಳಿ ವಂದಿಸಿದರು. ಈ ಕಾರ್ಯಕ್ರಮದಲ್ಲಿ 75 ಕ್ಕೂ ಅಧಿಕ ಪರಿಣಿತ ಕೃಷಿ ತಂತ್ರಜ್ಞರು, ಕೃಷಿ ತಂತ್ರಜ್ಞಾನಗಳ ಅನ್ವಯಿಕ ಸಂಸ್ಥೆ (ಅಟಾರಿ) ಬೆಂಗಳೂರಿನ ಅಧಿಕಾರಿಗಳು ಭಾಗವಹಿಸಿದ್ದರು.