ತಂತ್ರಜ್ಞಾನಕ್ಕೆ ಪರಿಸರ ಉಳಿಸುವ ಗುಣವಿರಲಿ

ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದಿನಿಂದ ಆರಂಭವಾಗಿರುವ ಟೆಕ್ ಶೃಂಗಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಸಚಿವರಾದ ಮುರುಗೇಶ್ ನಿರಾಣಿ, ಡಾ.ಸಿ.ಎನ್. ಅಶ್ವತ್ಥ್ ನಾರಾಯಣ, ಮತ್ತಿತರರು ಇದ್ದಾರೆ.

ಬೆಂಗಳೂರು,ನ.೧೬- ಯಾವುದೇ ತಂತ್ರಜ್ಞಾನ ಪರಿಸರವನ್ನು ಉಳಿಸುವ ಗುಣ ಹೊಂದಿರಬೇಕು, ಪರಿಸರ ಸ್ನೇಹಿ ತಂತ್ರಜ್ಞಾನ ಇಂದಿನ ಅವಶ್ಯಕತೆಗಳಲ್ಲಿ ಒಂದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.ಬೆಂಗಳೂರು ತಂತ್ರಜ್ಞಾನ ಶೃಂಗದ ರಜತೋತ್ಸವ ಸಮಾವೇಶದಲ್ಲಿ ಮಾತನಾಡಿದ ಅವರು, ಜಗತ್ತು ಇಂದು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದೆ. ಸಮಸ್ಯೆಗಳಿಂದ ಮುಳುಗುತ್ತಿದೆ. ಹಣಕಾಸು ಮೂಲಗಳು ಇಳಿಮುಖವಾಗುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳದಿದ್ದರೆ ಭವಿಷ್ಯದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದರು.ನಮ್ಮ ಪೂರ್ವಜರು ವ್ಯವಸ್ಥಿತ ಜೀವನ ಮಾಡುತ್ತಿದ್ದರು. ಯಾವುದೇ ತಂತ್ರಜ್ಞಾನ ಬಂದರೂ ಈ ಪರಿಸರವನ್ನು ಉಳಿಸುವ ಗುಣ ಹೊಂದಿರಬೇಕು. ಐಟಿ-ಬಿಟಿ ಆರ್ಟಿಫಿಷಲ್ ಇಂಟಲಿಜೆನ್ಸ್ ನಮ್ಮ ಸಂಪನ್ಮೂಲವನ್ನು ರಕ್ಷಣೆ ಮಾಡುವ ಸಾಧ್ಯತೆ ಇದೆ ಎಂದರು.ಮಾನವ ಕುಲಕ್ಕೆ ಯಾವುದು ಅನುಕೂಲವಾಗುತ್ತದೆ ಎಂಬುದನ್ನು ತಂತ್ರಜ್ಞಾನ ಪರಿಣಿತರೇ ಪರೀಕ್ಷಿಸಿ ನಿರ್ಧರಿಸಬೇಕು ಎಂದು ಮುಖ್ಯಮಂತ್ರಿಗಳು ಸಲಹೆ ಮಾಡಿದರು.
೬ ಹೊಸ ನಗರ ನಿರ್ಮಾಣ
ರಾಜ್ಯದಲ್ಲಿ ೬ ಹೊಸ ನಗರಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಬೆಂಗಳೂರಿನ ಪಕ್ಕ, ಕಲಬುರಗಿ, ಹುಬ್ಬಳ್ಳಿ-ಧಾರವಾಡ, ಮೈಸೂರು, ಮಂಗಳೂರು ಸುತ್ತ ಹೊಸ ನಗರ ನಿರ್ಮಾಣವಾಗುತ್ತದೆ ಎಂದರು.ಮೈಸೂರು ಮಹಾರಾಜರು ವಿಜ್ಞಾನ-ತಂತ್ರಜ್ಞಾನಕ್ಕೆ, ಶಿಕ್ಷಣಕ್ಕೆ ಹಾಗೂ ಉದ್ಯಮಗಳಿಗೆ ಆದ್ಯತೆ ನೀಡಿದ್ದರು. ಈಗ ಐಟಿ-ಬಿಟಿ ಬಂದಿದೆ ಎಂದರು.ಮೊದಲು ಸಂಪತ್ತು ಉಳ್ಳವರ ಕಾಲವಿತ್ತು, ಈಗ ಜ್ಞಾನ ಇರುವವರ ಕಾಲ, ಬೆಂಗಳೂರಿಗೆ ಯಾರೇ ಗಣ್ಯರು ಬಂದರೂ ಐಟಿ-ಬಿಟಿ ಕಂಪನಿಗೆ ಭೇಟಿ ನೀಡುತ್ತಾರೆ. ಪ್ರತಿದಿನ ೫ ಸಾವಿರಕ್ಕೂ ಹೆಚ್ಚು ತಂತ್ರಜ್ಞರು ದೇಶ-ವಿದೇಶಗಳಿಂದ ಬೆಂಗಳೂರಿಗೆ ಬಂದು ಹೋಗುತ್ತಾರೆ ಎಂದರು.ಬಿ ಯಾಂಡ್ ಬೆಂಗಳೂರು ಅಂದರೆ ಬೆಂಗಳೂರು ಹೊರತುಪಡಿಸಿ ಮೈಸೂರು, ಮಂಗಳೂರು, ಹುಬ್ಬಳ್ಳಿ, ಧಾರವಾಡಗಳಲ್ಲೂ ಐಟಿ ಉದ್ಯಮ ಸ್ಥಾಪನೆಗೆ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡುತ್ತಿದೆ ಎಂದರು.ಮುಂದಿನ ೧೦ ವರ್ಷದಲ್ಲಿ ನಗರೀಕರಣ ಹೆಚ್ಚಳವಾಗಲಿದೆ, ಭಾರತದಲ್ಲಿ ಶೇ. ೪೦ರಷ್ಟು ನಗರೀಕರಣವಾಗಲಿದೆ. ಹೀಗಾಗಿ, ಸರಳ ನಗರೀಕರಣ ಜೀವನ ನಿರ್ವಹಣೆಗೆ ತಂತ್ರಜ್ಞಾನ ಅಭಿವೃದ್ಧಿಪಡಿಸಿ ಆರೋಗ್ಯಯುತ ಸಮಾಜ ನಿರ್ಮಾಣ ಮಾಡಬೇಕಿದೆ ಎಂದರು.ಬೆಂಗಳೂರಿನಲ್ಲಿ ಎಲ್ಲವೂ ಸಾಧ್ಯವಿದೆ, ಉದ್ಯಮಿಗಳು ಇಲ್ಲಿನ ಉದ್ಯಮಿ ಸ್ನೇಹಿ ವಾತಾವರಣವನ್ನು ಬಳಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.