ತಂಡದಿಂದ ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಯುವಕ ಮೃತ್ಯು

ಸುಳ್ಯ:ಬೆಳ್ಳಾರೆ ಠಾಣಾ ವ್ಯಾಪ್ತಿಯ ಕಳಂಜದಲ್ಲಿ ಎಂಟು ಜನರ ತಂಡದಿಂದ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಸೋಡಾ ಬಾಟಲಿಯಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿ ಮಂಗಳೂರಿನ ಖಾಸಾಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ಕಾಸರಗೋಡು ಜಿಲ್ಲೆಯ ಮೊಗ್ರಾಲ್ ಪುತ್ತೂರು ನಿವಾಸಿ ಮಸೂದ್(೧೮) ಮೃತಪಟ್ಟ ಯುವಕ, ಮಸೂದ್ ಮೇಲೆ ಮಂಗಳವಾರ ರಾತ್ರಿ ಕಳಂಜ ಗ್ರಾಮದ ವಿಷ್ಣು ನಗರ ಎಂಬಲ್ಲಿ ಎಂಟು ಮಂದಿಯ ತಂಡವೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿತ್ತು. ಈ ವೇಳೆ ತಲೆಗೆ ಸೋಡಾ ಬಾಟಲಿಯ ಏಟು ಬಿದ್ದಿದ್ದರಿಂದ ಗಂಭೀರಾವಸ್ಥೆಗೆ ತಲುಪಿದ್ದ ಮಸೂದ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮಸೂದ್ ತಿಂಗಳ ಹಿಂದೆಯಷ್ಟೇ ಬೆಳ್ಳಾರೆಯ ಕಳಂಜದಲ್ಲಿರುವ ಅಜ್ಜ ಅಬ್ಬು ಎಂಬವರ ಮನೆಗೆ ಬಂದು ನೆಲೆಸಿದ್ದು, ಇಲ್ಲೇ ಸ್ಥಳೀಯವಾಗಿ ಕೂಲಿ ಕೆಲಸ ಮಾಡಿ ಕೊಂಡಿದ್ದರೆನ್ನಲಾಗಿದೆ. ಮಂಗಳವಾರ ಸಂಜೆ ವಿಷ್ಣು ನಗರದಲ್ಲಿ ಖಾಸಗಿ ಸಮಾರಂಭವೊಂದರಲ್ಲಿ ಭಾಗವಹಿಸಲು ಮಸೂದ್ ತೆರಳಿದ್ದು, ಈ ವೇಳೆ ಅಲ್ಲಿ ಸಮೀಪದ ಅಂಗಡಿಯ ಬಳಿ ಮೈ ತಾಗಿತು ಎಂಬ ಕ್ಷುಲ್ಲಕ ಕಾರಣಕ್ಕೆ ಯುವಕರ ತಂಡದ ಮಧ್ಯೆ ಮಾತಿನ ಚಕಮಕಿ, ಹೊಡೆದಾಟ ನಡೆದಿದೆ. ಈ ವೇಳೆ ಸುಧೀರ್‌ಗೆ ಮಸೂದ್ ಬಾಟಲಿ ತೋರಿಸಿ ಜೀವ ಬೆದರಿಕೆ ಹಾಕಿದ್ದರೆನ್ನಲಾಗಿದೆ. ಇದೇ ವಿಚಾರವಾಗಿ ಅಂದೇ ರಾತ್ರಿ ೧೦:೩೦ರ ಸುಮಾರಿಗೆ ಆರೋಪಿಗಳಾದ ಸುನೀಲ್ ಹಾಗೂ ಅಭಿಲಾಷ್ ಎಂಬವರು ದೂರುದಾರ ಇಬ್ರಾಹಿಂ ಶಾನಿಫ್‌ರನ್ನು ಸಂಪರ್ಕಿಸಿ ಸುಧೀರ್ ಮೇಲೆ ಮಸೂದ್ ಹಲ್ಲೆ ನಡೆಸಿದ್ದಾನೆ, ಇದನ್ನು ರಾಜಿ ಮಾತುಕತೆ ಮೂಲಕ ಮುಗಿಸೋಣ. ಅದಕ್ಕಾಗಿ ಮಸೂದ್‌ನನ್ನು ವಿಷ್ಣು ನಗರಕ್ಕೆ ಕರೆದುಕೊಂಡು ಬರುವಂತೆ ಸೂಚಿಸಿದ್ದಾರೆ.
ಅದರಂತೆ ರಾತ್ರಿ ೧೧ ಗಂಟೆ ಸುಮಾರಿಗೆ ಮಸೂದ್‌ರನ್ನು ಕರಕೊಂಡು ಶಾನಿಫ್ ವಿಷ್ಣು ನಗರಕ್ಕೆ ಬಂದಿದ್ದಾರೆ. ಈ ವೇಳೆ ಎಂಟು ಮಂದಿ ಆರೋಪಿಗಳು ಏಕಾಏಕಿ ಮಸೂದ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಆರೋಪಿ ಅಭಿಲಾಷ್ ಸೋಡಾ ಬಾಟಲಿಯಿಂದ ಮಸೂದ್‌ರ ತಲೆಗೆ ಬಲವಾಗಿ ಹೊಡೆದಿದ್ದಾನೆ ಎಂದು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿತ್ತು
ಬಳಿಕ ಮಸೂದ್ ಹಾಗೂ ಶಾನಿಫ್ ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ಬೇರೆ ಬೇರೆ ದಿಕ್ಕಿಗೆ ಅಲ್ಲಿಂದ ಓಡಿದ್ದಾರೆ. ಸ್ವಲ್ಪಹೊತ್ತಿನ ಬಳಿಕ ಶಾನಿಫ್ ಹಾಗೂ ಆತನ ಸ್ನೇಹಿತರು ಮಸೂದ್‌ಗಾಗಿ ಹುಡುಕಾಟ ನಡೆಸಿದ್ದು, ತಡರಾತ್ರಿ ೧:೩೦ರ ವೇಳೆ ಅದೇ ಪರಿಸರದ ಅಬೂಬಕರ್ ಎಂಬವರ ಮನೆಯ ಬಾವಿಯ ಬಳಿ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಮಸೂದ್ ಪತ್ತೆಯಾಗಿದ್ದರು. ಬಳಿಕ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಎಂಟು ಮಂದಿಯ ಬಂಧನ: ಹಲ್ಲೆಗೆ ಸಂಬಂಧಿಸಿ ಸುಳ್ಯ ತಾಲೂಕು ಪೆರುವಾಜೆ ಗ್ರಾಮದ ಪೆಲತ್ತಡ್ಕ ನಿವಾಸಿ ಇಬ್ರಾಹೀಂ ಶಾನಿಫ್ ಎಂಬವರು ನೀಡಿರುವ ದೂರಿನಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈಗಾಗಲೇ ಸ್ಥಳೀಯ ಆರೋಪಿಗಳಾದ ಸುನೀಲ್, ಸುಧೀರ್, ಶಿವ, ಸದಾಶಿವ, ರಂಜಿತ್, ಅಭಿಲಾಷ್, ಜಿಮ್ ರಂಜಿತ್ ಹಾಗೂ ಭಾಸ್ಕರ ಎಂಬವರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಆರೋಪಿಗಳಿಗೆ ನ್ಯಾಯಂಗ ಬಂಧನ ವಿಧಿಸಲಾಗಿದೆ. ಎಲ್ಲಾ ಆರೋಪಿಗಳಿಗೆ ನ್ಯಾಯಂಗ ಬಂಧನ ವಿಧಿಸಲಾಗಿದೆ.
ಸ್ಥಳಕ್ಕೆ ಡಿವೈಎಸ್‌ಪಿ ಗಾನಾ.ಪಿ.ಕುಮಾರ್, ಸುಳ್ಯ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ, ಬೆಳ್ಳಾರೆ ಠಾಣಾ ಉಪ ನಿರೀಕ್ಷಕ ರುಕ್ಮನಾಯ್ಕ್, ಕೈಂ ಎಸ್.ಐ ಆನಂದ್, ಕಡಬ ಎಸ್.ಐ ಆಂಜನೇಯ ರೆಡ್ಡಿ, ಸುಳ್ಯ ಎಸ್.ಐ. ದಿಲೀಪ್ ಕುಮಾರ್, ಬಂಟ್ವಾಳ ಗ್ರಾಮಾಂತರ ಠಾಣಾ ಎಸ್.ಐ ಹರೀಶ್ ಎಂ.ಆರ್ ಮತ್ತು ಸಿಬ್ಬಂಧಿಗಳು ಇದ್ದರು.