ಡ್ರೈ ಫ್ರೂಟ್ಸ್ ಪಲಾವ್

ಅಗತ್ಯವಿರುವ ಸಾಮಾಗ್ರಿಗಳು
ಅಕ್ಕಿ – ಎರಡು ಕಪ್ (ಬಾಸ್ಮತಿ ಉತ್ತಮ ಆಯ್ಕೆ) ಚೆನ್ನಾಗಿ ತೊಳೆದು ನೀರು ಬಸಿದು ಒಣಗಿಸಿದ್ದು.
ಬಾದಾಮಿ – ಹತ್ತು (ಒಂದೊಂದನ್ನು ನಾಲ್ಕು ತುಂಡಾಗಿಸಿ)
ಒಣದ್ರಾಕ್ಷಿ – ಹತ್ತು
ಗೋಡಂಬಿ – ಹತ್ತು (ಒಂದೊಂದನ್ನು ಆರು ತುಂಡಾಗಿಸಿ)
ತುಪ್ಪ – ಎರಡು ದೊಡ್ಡ ಚಮಚ
ಕಾಳುಮೆಣಸು (ಇಡಿಯದ್ದು) – ಒಂದು ಚಿಕ್ಕ ಚಮಚ
ಉಪ್ಪು – ರುಚಿಗನುಸಾರ
ದಾಲ್ಚಿನ್ನಿ ಎಲೆ – ಎರಡು (ಇಡಿಯ)
ಕೇಸರಿ- ಒಂದು ಚಿಟಿಕೆ
ಮಾಡುವ ವಿಧಾನ:
ನಾನ್ ಸ್ಟಿಕ್ ಪಾತ್ರೆಯೊಂದರಲ್ಲಿ ಕೊಂಚ ನೀರು ತುಂಬಿಸಿ ಕುದಿಸಿ ಬದಿಗಿಡಿ. ಇನ್ನೊಂದು ಪಾತ್ರೆಯಲ್ಲಿ ತುಪ್ಪ ಹಾಕಿ ಮಧ್ಯಮ ಉರಿಯಲ್ಲಿ ಬಿಸಿಮಾಡಿ. ತುಪ್ಪ ಕರಗುತ್ತಿದ್ದಂತೆಯೇ ದಾಲ್ಚಿನ್ನಿ ಎಲೆ, ಕಾಳುಮೆಣಸು, ಬಾದಾಮಿ, ಗೋಡಂಬಿ, ದ್ರಾಕ್ಷಿ ಹಾಕಿ ಹುರಿಯಿರಿ. ಕೊಂಚ ಕೆಂಪು ಬಣ್ಣ ಬರುತ್ತಿದ್ದಂತೆಯೇ ಇದಕ್ಕೆ ಅಕ್ಕಿ ಹಾಕಿ ಸುಮಾರು ಎರಡು ನಿಮಿಷಗಳ ವರೆಗೆ ಹುರಿಯಿರಿ. ಈಗ ಉಪ್ಪು ಮತ್ತು ಕೇಸರಿ ಹಾಕಿ ಅರ್ಧ ನಿಮಿಷ ಹುರಿಯಿರಿ. ಇದಕ್ಕೆ ಕುದಿಸಿಟ್ಟ ನೀರಿನಿಂದ ಮೂರು ಕಪ್ ನೀರು ಹಾಕಿ ಸ್ವಲ್ಪ ತಿರುವಿ ಕುದಿಯಲು ಬಿಡಿ. ಕುದಿ ಬಂದ ಬಳಿಕ ಉರಿಯನ್ನು ಚಿಕ್ಕದಾಗಿಸಿ ಪಾತ್ರೆಯ ಮುಚ್ಚಳ ಮುಚ್ಚಿ ಹಬೆಯಲ್ಲಿ ಅಕ್ಕಿ ಬೇಯುವಂತೆ ಮಾಡಿ. ಸುಮಾರು ನಾಲ್ಕು ಅಥವಾ ಐದು ನಿಮಿಷದ ಬಳಿಕ ಅಕ್ಕಿ ಬೆಂದಿದೆಯೇ ಪರೀಕ್ಷಿಸಿ ಬೆಂದಿದ್ದರೆ ಉರಿಯನ್ನು ನಂದಿಸಿ ಮುಚ್ಚಳವನ್ನು ಇನ್ನೂ ಕೊಂಚ ಹೊತ್ತು ಮುಚ್ಚಿಯೇ ಇರಿಸಿ.
1) ಒಣಫಲಗಳ ಜೊತೆಗೇ ಶೇಂಗಾಬೀಜವನ್ನೂ ಸೇರಿಸಬಹುದು. ಆದರೆ ಇದನ್ನು ಮೊದಲೇ ಕೊಂಚ ಹುರಿದಿಟ್ಟುಕೊಂಡಿರಬೇಕು, ಏಕೆಂದರೆ ಬಾದಾಮಿ ಗೋಡಂಬಿಗಳಷ್ಟು ಬೇಗ ಶೇಂಗಾ ಬೀಜ ಕೆಂಪಗಾಗುವುದಿಲ್ಲ.
ಅದರಲ್ಲೂ ಮರಳಿನಲ್ಲಿ ಹುರಿದ ಶೇಂಗಾಬೀಜ ಈ ಪಲಾವಿಗೆ ಹೇಳಿ ಮಾಡಿಸಿದ್ದುದಾಗಿದೆ.
2) ಅಲಂಕಾರ ಹೆಚ್ಚಿಸಲು ಬೇಯಿಸಿದ ಕ್ಯಾರೆಟ್, ಕೊತ್ತಂಬರಿ ಸೊಪ್ಪು, ಚಿಕ್ಕದಾಗಿ ಕತ್ತರಿಸಿದ ಈರುಳ್ಳಿಯ ಎಲೆ ಮೊದಲಾದವುಗಳನ್ನೂ ಸೇರಿಸಬಹುದು.
3) ಅಣಬೆ ಇದ್ದರೆ ಪ್ರತ್ಯೇಕವಾಗಿ ಬೇಯಿಸಿ ಅಕ್ಕಿ ಬೇಯುವ ಹೊತ್ತಿನಲ್ಲಿ ಸೇರಿಸಬಹುದು.