ಡ್ರೈವಿಂಗ್ ಸ್ಕೂಲ್ ಸಿಬ್ಬಂದಿ ಮೇಲೆ ಹಲ್ಲೆ-ಕ್ರಮಕ್ಕೆ ಆಗ್ರಹ

ಕೋಲಾರ, ಜು.೨೬: ಆರ್‍ಟಿಒ ಕಚೇರಿಯೆದುರು ಜು.೨೦ರಂದು ಕೆಆರೆಸ್ ಪಕ್ಷದ ಮುಖಂಡರು ಡ್ರೈವಿಂಗ್ ಸ್ಕೂಲ್ ಸಿಬ್ಬಂದಿಯನ್ನು ನಿಂದಿಸಿ, ಹಲ್ಲೆ ನಡೆಸಿದ್ದು ಅವರ ಮೇಲೆ ಕಾನೂನು ಕ್ರಮಕೈಗೊಂಡು ಸಿಬ್ಬಂದಿಗೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿ ರಾಜ್ಯ ಮೋಟಾರ್ ವಾಹನ ಚಾಲನಾ ತರಬೇತಿ ಶಾಲೆಗಳ ಮಾಲೀಕರ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಕೋಲಾರದಲ್ಲಿ ನಡೆದಿರುವ ಘಟನೆಯು ರಾಜ್ಯದಲ್ಲಿ ಎಲ್ಲಿಯೂ ಸಹ ಮುಂದೆ ನಡೆಯಬಾರದು ಎನ್ನುವ ನಿಟ್ಟಿನಲ್ಲಿ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ. ನಾವು ಕಾನೂನು ಬದ್ಧವಾಗಿ ನಮ್ಮ ಕೆಲಸವನ್ನು ಮಾಡುತ್ತಿದ್ದೇವೆ.
ಕೆಆರೆಸ್ ಪಕ್ಷದ ಅಧ್ಯಕ್ಷರನ್ನು, ಪ್ರಧಾನಿಯವರನ್ನು ಸೇರಿದಂತೆ ಅಧಿಕಾರಿಗಳು, ಗಣ್ಯರನ್ನು ಕರೆದುಕೊಂಡು ಹೋಗುವುದು ನಮ್ಮ ಡ್ರೈವರ್‍ಗಳು. ಅಂತಹ ಚಾಲನೆ ಕೆಲಸವನ್ನು ಕಲಿಸುವ ನಮ್ಮವರ ಮೇಲೆ ಹಲ್ಲೆ ನಡೆಸಿರುವುದು ಸರಿಯಲ್ಲ. ಸಾರ್ವಜನಿಕರಿಗೆ ಯಾರಿಗಾದರೂ ತೊಂದರೆಯಾಗಿದ್ದರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಿ, ಅಧಿಕಾರಿಗಳ ಬಳಿ ಹೋಗಿ ಕೇಳಲಿ. ಅದನ್ನು ಬಿಟ್ಟು ನಮ್ಮ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಲು, ಪ್ರಶ್ನಿಸಲು ಕೆಆರೆಸ್ ಪಕ್ಷದವರು ಯಾರು ಎಂದು ಕಿಡಿಕಾರಿದರು.
ಭ್ರಷ್ಟಾಚಾರ ವಿರುದ್ಧದ ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲವೂ ಇರುತ್ತದೆ. ಆಸ್ಪತ್ರೆಗಳು, ಶಾಲೆಗಳಲ್ಲಿ ಭ್ರಷ್ಟಾಚಾರಗಳಾಗುತ್ತಿದೆ. ಅಲ್ಲಿ ಹೋಗಿ ತಡೆಯಲಿ, ನಾವೂ ಬೆಂಬಲ ನೀಡುತ್ತೇವೆ. ಆದರೆ, ಒಂದೆರೆಡು ಸಾವಿರ ಕಾರ್ಯಕರ್ತರನ್ನು ಹೊಂದಿರುವ ಪಕ್ಷವು ಸುಮಾರು ೪-೫ ಲಕ್ಷ ಸಿಬ್ಬಂದಿಯನ್ನು ಹೊಂದಿರುವ ನಮ್ಮ ಸಂಘಟನೆಯವರ ಮೇಲೆ ಹಲ್ಲೆ ನಡೆಸಿದ್ದೀರಿ, ನಾವು ತಿರುಗಿಬಿದ್ದರೆ ನಿಮ್ಮ ಪರಿಸ್ಥಿತಿ ಏನಾಗಬಹುದು ಎಂದು ಪ್ರಶ್ನಿಸಿ, ಇಂತಹ ಘಟನೆ ಮರುಕಳಿಸಿದರೆ ನಾವೂ ತಿರುಗೇಟು ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಆನಂದ ಪಾಟೀಲ್, ಕಾರ್ಯದರ್ಶಿ ನಾಗರಾಜ್, ರಾಜ್ಯ ಸಮಿತಿ ಸದಸ್ಯರಾದ ಕೃಷ್ಣೇಗೌಡ, ರಂಗನಾಥ್, ಜಿಲ್ಲಾಧ್ಯಕ್ಷ ಚಿದಂಬರಂ, ಉಪಾಧ್ಯಕ್ಷ ಸಾಧಿಕ್, ಮುಖಂಡರಾದ ಷೇಕ್ ಜಮೀರ್, ನಿತೀಶ್ ಯಾದವ್, ನಾರಾಯಣಸ್ವಾಮಿ, ಬೈಚೇಗೌಡ, ಬಸವರಾಜ್, ವೆಂಕಟಾಚಲಪತಿ, ಕೃಷ್ಣ ಕಿಟ್ಟಿ (ಕೆಎಂಕೆ) ಉಪಸ್ಥಿತರಿದ್ದರು.