ಡ್ರೈವಿಂಗ್ ಶಾಲೆ ಸಂಘದ ಅಧ್ಯಕ್ಷ ಗೋಪಾಲ್ ವಿಧಿವಶ: ಸಂತಾಪ

ಕೋಲಾರ,ಏ.೨೪: ಜಿಲ್ಲಾ ಯಾದವ ಸಂಘದ ಉಪಾಧ್ಯಕ್ಷರೂ, ಜಿಲ್ಲೆಯ ಡ್ರೈವಿಂಗ್ ಸ್ಕೂಲ್ಸ್ ಅಸೋಸಿಯೇಷನ್ ಅಧ್ಯಕ್ಷರೂ ಆಗಿದ್ದ ಸದಾ ಹಸನ್ಮುಖಿ,ಸ್ನೇಹಜೀವಿ ಆರ್.ಗೋಪಾಲ್(೫೮) ಗುರುವಾರ ಸಂಜೆ ಹೃದಯಾಘಾತದಿಂದ ವಿಧಿವಶರಾಗಿದ್ದು, ಅಂತ್ಯ ಸಂಸ್ಕಾರ ನಗರದ ಕನಕನಪಾಳ್ಯದ ಹಿಂದೂ ರುದ್ರಭೂಮಿಯಲ್ಲಿ ಶುಕ್ರವಾರ ಮಧ್ಯಾಹ್ನ ನೆರವೇರಿತು.
ಉಸಿರಾಟದ ತೊಂದರೆಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ಗುರುವಾರ ಸಂಜೆ ಹೃದಯಾಘಾತವಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಮೃತರು ಪತ್ನಿ ವರಲಕ್ಷ್ಮಿ, ಇಬ್ಬರು ಪುತ್ರರಾದ ನಿತೀಶ್ ಯಾದವ್, ಬೆನಕೇಶ್‌ಯಾದವ್ ಸೇರಿದಂತೆ ಅಪಾರ ಸಂಖ್ಯೆಯ ಸ್ನೇಹಿತರು, ಬಂಧುಬಳಗವನ್ನು ಅಗಲಿದ್ದಾರೆ. ಗೋಪಾಲ್ ಅವರ ಮೃತದೇಹವನ್ನು ಶುಕ್ರವಾರ ಬೆಳಗ್ಗೆ ನಗರಕ್ಕೆ ತರಲಾಗಿದ್ದು, ಮಧ್ಯಾಹ್ನ ಕೋವಿಡ್ ಮಾರ್ಗಸೂಚಿಯಡಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.ಈ ಸಂದರ್ಭದಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್ ಸೇರಿದಂತೆ ಗೋಕುಲ ಮಿತ್ರಬಳಗದ ಸದಸ್ಯರು ಹಾಜರಿದ್ದು, ಅಂತಿಮ ದರ್ಶನ ಪಡೆದರು.
ನಗರದಲ್ಲಿ ಮೊದಲ ಡ್ರೈವಿಂಗ್ ಸ್ಕೂಲ್ ಆರಂಭಿಸಿದ ಕೀರ್ತಿಗೆ ಭಾಜನರಾಗಿದ್ದ ಗೋಪಾಲ್ ಅವರ ಕೋಲಾರಮ್ಮ ಡ್ರೈವಿಂಗ್ ಸ್ಕೂಲ್ ಜಿಲ್ಲೆಯ ಅನೇಕ ಜನಪ್ರತಿನಿಧಿಗಳಿಗೆ ಅಧಿಕಾರಿಗಳು ಸೇರಿದಂತೆ ಸಾವಿರಾರು ಮಂದಿಗೆ ಚಾಲನಾ ತರಬೇತಿ ನೀಡಿದೆ.ಸದಾ ನಗುಮೊಗದಿಂದ ಸಾರ್ವಜನಿಕರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಗೋಪಾಲ್ ತಮ್ಮ ಡ್ರೈವಿಂಗ್ ಸ್ಕೂಲ್‌ನಲ್ಲಿ ಚಾಲನಾ ತರಬೇತಿ ಜತೆಗೆ ವಿಶಿಷ್ಟ ರೀತಿಯಲ್ಲಿ ವಾಹನ ನಿರ್ವಹಣೆ ತರಬೇತಿಗೂ ಅವಕಾಶ ಕಲ್ಪಿಸಿಕೊಟ್ಟು ಹಳೆಯ ವಾಹನದ ಇಂಜಿನ್ ಬಿಡಿಭಾಗಗಳ ಬಗ್ಗೆ ಅರಿವು ಮತ್ತು ದುರಸ್ಥಿ ಕುರಿತ ತರಬೇತಿಯನ್ನು ಶಿಕ್ಷಣಾರ್ಥಿಗಳಿಗೆ ನೀಡುತ್ತಿದ್ದುದು ವಿಶೇಷವಾಗಿತ್ತು.
ಜಿಲ್ಲಾ ಯಾದವ ಸಂಘದ ಉಪಾಧ್ಯಕ್ಷರಾಗಿದ್ದ ಅವರು ಸಮುದಾಯದ ಸಂಘಟನೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದರು.
ಆರ್.ಗೋಪಾಲ್ ಅವರ ನಿಧನಕ್ಕೆ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಮಾಜಿ ಸಚಿವ ವರ್ತೂರು ಪ್ರಕಾಶ್, ಜಿಲ್ಲಾ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್, ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಕೆ.ಜಯದೇವ್, ಪತ್ರಕರ್ತ ಚಾಂದ್‌ಪಾಷ, ಗೋಕುಲ ಮಿತ್ರಬಳಗದ ಮುನಿವೆಂಕಟಯಾದವ್, ಕೃಷ್ಣ, ಮಣಿ,ಚಲಪತಿ, ಶಿವ, ಲಚ್ಚಿ ಮತ್ತಿತರರು ಸಂತಾಪ ಸೂಚಿಸಿದ್ದಾರೆ.