ಡ್ರಮ್ ನಲ್ಲಿ ಮಹಿಳೆ ಶವ ಪತ್ತೆ ತೀವ್ರಗೊಂಡ ತನಿಖೆ

ಬೆಂಗಳೂರು,ಜ.೬-ಯಶವಂತಪುರ ರೈಲ್ವೇ ನಿಲ್ದಾಣದಲ್ಲಿ ನೀಲಿ ಡ್ರಮ್ ನಲ್ಲಿ ಅಪರಿಚಿತ ಮಹಿಳೆಯ ಮೃತದೇಹದ ಮರಣೋತ್ತರ ಪರೀಕ್ಷೆ ವರದಿಯಿಂದ ತರಿಸಿಕೊಂಡಿರುವ ರೈಲ್ವೇ ಪೊಲೀಸರು ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಮಹಿಳೆಯ ಕುತ್ತಿಗೆ ಬಿಗಿದು ಹಂತಕರು ಕೊಲೆ ಮಾಡಿರುವುದು ಮರಣೋತ್ತರ ಪರೀಕ್ಷೆ ವರದಿಯಿಂದ ಗೊತ್ತಾಗಿದೆ.
ದಿನಕ್ಕೆ ಲಕ್ಷಾಂತರ ಪ್ರಯಾಣಿಕರು ಓಡಾಡುವ ಯಶವಂತಪುರ ರೈಲ್ವೇ ನಿಲ್ದಾಣದ ಪ್ಲಾಟ್ ಫಾರ್ಮ್ -೧ ರಲ್ಲಿ ನೀಲಿ ಬಣ್ಣದ ಡ್ರಮ್ ನಲ್ಲಿ ಬಟ್ಟೆ ರಾಶಿಯೊಂದಿಗೆ ಅಪರಿಚಿತ ಮಹಿಳೆ ಶವ ಎರಡು ದಿನಗಳ ಹಿಂದೆ ಪತ್ತೆಯಾಗಿತ್ತು. ರಕ್ತಸಿಕ್ತವಾಗಿ ಸಿಕ್ಕ ಶವವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು.ಶವ ಪರೀಕ್ಷೆ ನಡೆಸಿದ ವೈದ್ಯರು ರೈಲ್ವೇ ಪೊಲೀಸರಿಗೆ ವರದಿ ನೀಡಿದ್ದು ಕುತ್ತಿಗೆಯಿಂದ ಬಿಗಿದು ಮಹಿಳೆಯನ್ನು ಕೊಲೆ ಮಾಡಿರುವುದು ವರದಿಯಲ್ಲಿ ಉಲ್ಲೇಖಿಸಲಾಗಿದೆ.ಮೃತ ಮಹಿಳೆಯನ್ನು ಉತ್ತರ ಭಾರತ ಮೂಲದವರು ಎಂದು ಹೇಳಲಾಗುತ್ತಿದೆ.
ರೈಲ್ವೇ ನಿಲ್ದಾಣ ಒಳ ಹಾಗೂ ಹೊರಗೆ ಅಳವಡಿಸಿದ್ದ ಸಿಸಿಟಿವಿ ಪರಿಶೀಲಿಸಿದಾಗ ಡಿಸೆಂಬರ್ ೨೬ರಿಂದಲೂ ನೀಲಿ ಡ್ರಮ್ ಇರುವುದು ಗೊತ್ತಾಗಿದೆ. ಕಳೆದ ಡಿಸೆಂಬರ್ ೨೪ ಅಥವಾ ೨೫ ರಂದು ಕೊಲೆ ಮಾಡಿ ಆರೋಪಿಗಳು ಡ್ರಮ್ ಇಟ್ಟು ಹೋಗಿರುವ ಶಂಕೆ ವ್ಯಕ್ತವಾಗಿದೆ.
ಯಶವಂತಪುರ ರೈಲು ನಿಲ್ದಾಣದಲ್ಲಿ ನೀಲಿ ಡ್ರಮ್ ಗಳಲ್ಲಿ ಹೆಚ್ಚಾಗಿ ಮೀನು ಸಾಗಾಟ ಮಾಡುತ್ತಾರೆ. ಹಾಗಾಗಿ ಆ ಡ್ರಮ್ ಬಗ್ಗೆ ರೈಲ್ವೇ ಸಿಬ್ಬಂದಿ ತಲೆಕೆಡಿಸಿಕೊಂಡಿರಲಿಲ್ಲ. ಸದ್ಯ ದಾಖಲಾಗಿರುವ ಎಲ್ಲಾ ನಾಪತ್ತೆ ದೂರುಗಳ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ ಎಂದು ರೈಲ್ವೇ ಎಸ್ಪಿ ಡಾ. ಸೌಮ್ಯಲತಾ ಅವರು ತಿಳಿಸಿದ್ದಾರೆ.