ಡ್ರಗ್ ಮಾರಾಟ: ಇಬ್ಬರ ಸೆರೆ

ಉಳ್ಳಾಲ, ಎ.೨- ತಲಪಾಡಿ ತಚ್ಚಣಿ ಬಳಿಯ ಬಾರೊಂದರ ಬಳಿ ನಿಷೇಧಿತ ಎಂ.ಡಿ.ಎಂ.ಎ. ಡ್ರಗ್ ಪೌಡರ್ ಮಾರಾಟ ಮಾಡುತ್ತಿದ್ದ ಉಪ್ಪಳ ಮೂಲದ ಇಬ್ಬರನ್ನು ಮಂಗಳೂರು ದಕ್ಷಿಣ ಸಹಾಯಕ ಪೊಲೀಸ್ ಆಯುಕ್ತ ರಂಜಿತ್ ಬಂಡಾರು ನೇತೃತ್ವದ ತಂಡ ಮತ್ತು ಉಳ್ಳಾಲ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ.
ಉಪ್ಪಳ ಪಚ್ಚಿಲಮಾರ್ ನಿವಾಸಿ ಫಜಲ್ ಪಿ.ಎಂ.(೨೭), ಮತ್ತು ಉಪ್ಪಳ ಮಜಲ್ ನಿವಾಸಿ ಮುಹಮ್ಮದ್ ನೌಫಾಲ್ ಬಂಧಿತ ಆರೋಪಿಗಳಾಗಿದ್ದು, ತಲಪಾಡಿ ತಚ್ಛಣಿ ಬಾರ್ ಬಳಿ ನಿಷೇಧಿತ ಡ್ರಗ್ ಪೌಡರ್ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಬಂಧಿಸಿ ಅವರಿಂದ ಡ್ರಗ್ ಪೌಡರ್ ಸಹಿತ ಬೈಕ್ ಮತ್ತು ಕಾರನ್ನು ವಶಕ್ಕ ತೆಗೆದುಕೊಂಡಿದ್ದಾರೆ. ಪೊಲೀಸ್ ಆಯುಕ್ತ ಶಶಿಕುಮಾರ್ ನಿರ್ದೇಶನದಂತೆ ಡಿಸಿಪಿಗಳಾದ ಹರಿರಾಮ್ ಶಂಕರ್ ಮತ್ತು ವಿನಯ ಗಾಂವ್ಕರ್ ಮಾರ್ಗದರ್ಶನದಲ್ಲಿ ಎಸಿಪಿ ನೇತೃತ್ವದಲ್ಲಿ ಸಿಬ್ಬಂದಿ ಭಾಗವಹಿಸಿದ್ದರು.