ಡ್ರಗ್ ಮಾರಾಟ ಇಬ್ಬರು ನೈಜೀರಿಯಾ ಪ್ರಜೆಗಳ ಸೆರೆ

Ganja and Kokain vasha --- Rajgopal Nagar

ಬೆಂಗಳೂರು, ಸೆ.೧೬-ಬಟ್ಟೆ ವ್ಯಾಪಾರದ ನೆಪದಲ್ಲಿ ಭಾರತಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ನೈಜೀರಿಯಾದ ಇಬ್ಬರು ಪ್ರಜೆಗಳನ್ನು ಬಂಧಿಸುವಲ್ಲಿ ರಾಜಗೋಪಾಲನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ನೈಜಿರಿಯಾ ದೇಶದ ಓಬಿ ಸ್ಟೇಟ್ ನ ಯಲಹಂಕ ಬಾಗಲೂರು, ಹುಣಸಮಾರನಹಳ್ಳಿಯಲ್ಲಿ ವಾಸಿ ಥಾಮಸ್ (೪೬), ಅದೇ ದೇಶದ ನಿವಾಸಿ ಬಾಗಲೂರಿನಲ್ಲಿ ನೆಲೆಸಿದ್ದ ಇಕೆಚುಕ್ವಾ ಡೆನಿಯಲ್ (೩೯) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದ್ದಾರೆ.
ಪೀಣ್ಯ ೨ನೇ ಹಂತದ ಜಿ.ಕೆ.ಡಬ್ಲ್ಯು ಲೇಔಟ್ ನಲ್ಲಿ ಮೂವರು ವ್ಯಕ್ತಿಗಳು ಮಾದಕ ವಸ್ತು ಕೊಕೇನ್ ಮತ್ತು ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ದೊರೆತ ತಕ್ಷಣ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ರಾಜಗೋಪಾಲನಗರ ಪಿಎಸ್ ಐ ರಾಘವೇಂದ್ರ ಉಪರಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು ಪೊಲೀಸರನ್ನು ಕಂಡ ತಕ್ಷಣ ಆರೋಪಿಗಳು ಓಡಲಾರಂಭಿಸಿದ್ದಾರೆ. ಅವರನ್ನು ಬೆನ್ನಟ್ಟಿ ಹಿಡಿದ ಪೊಲೀಸರು ಅವರ ಬ್ಯಾಗ್ ನಲ್ಲಿದ್ದ ಗಾಂಜಾ ಮತ್ತು ಕೊಕೇನ್ ಎಂಬ ಮಾದಕ ವಸ್ತುಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಂಧಿಸಿದ್ದಾರೆ.
ಬಂಧಿತರಿಂದ ೨.೨೬ ಕೆ.ಜಿ.ತೂಕದ ಗಾಂಜಾ, ೬ ಗ್ರಾಂ ಕೊಕೇನ್, ಕೃತ್ಯಕ್ಕೆ ಬಳಸಿದ್ದ ೧ ದ್ವಿಕ್ರ ವಾಹನ, ೧ ತೂಕ ಮಾಡುವ ಯಂತ್ರ, ೮೪೦ ರೂ.ನಗದು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಮೂಲತಃ ನೈಜಿರಿಯಾ ದೇಶದವರಾಗಿದ್ದು, ವ್ಯಾಪಾರಕ್ಕಾಗಿ ಭಾರತಕ್ಕೆ ಬಂದು ತಮಿಳುನಾಡಿನಿಂದ ಟೀ ಶರ್ಟ್ ಮತ್ತು ಜೀನ್ಸ್ ಪ್ಯಾಂಟ್ ಖರೀದಿಸಿ ತಂದು ಬೆಂಗಳೂರಿನಲ್ಲಿ ಮಾರಾಟ ಮಾಡುವಾಗ ರಾಜೇಶ್ ಎಂಬಾತನ ಪರಿಚಯವಾಗಿದೆ. ಆತನಿಂದ ಗಾಂಜಾ ಪಡೆದು ಸಾರ್ವಜನಿಕರಿಗೆ ಮಾರಾಟ ಮಾಡಿ ಸುಲಭವಾಗಿ ಹೆಚ್ಚಿನ ಹಣ ಗಳಿಸುತ್ತಿದ್ದುದಾಗಿ ತನಿಖೆಯಿಂದ ತಿಳಿದುಬಂದಿದೆ. ತಲೆಮರೆಸಿಕೊಂಡಿರುವ ಆರೋಪಿ ರಾಜೇಶ್ ಪತ್ತೆ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದರು.
ರಾಜಗೋಪಾಲನಗರ ಪೊಲೀಸ್ ಇನ್ಸ್ ಪೆಕ್ಟರ್ ಬಿ.ಐಯ್ಯಣ್ಣ ರೆಡ್ಡಿ , ಪಿಎಸ್ ಐ ರಾಘವೇಂದ್ರ ಉಪರಿ ಹಾಗೂ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.