ಡ್ರಗ್‌ಪೆಡ್ಲರ್ ವೀರೇನ್‌ಗೆ ಬಿಡುಗಡೆ ಭಾಗ್ಯವಿಲ್ಲ


ಬೆಂಗಳೂರು,ಜ.೫-ಡ್ರಗ್ಸ್ ಜಾಲದಲ್ಲಿ ಭಾಗಿಯಾಗಿರುವ ಸಂಬಂಧ ಬಾಣಸವಾಡಿ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಹೈಕೋರ್ಟ್ ಜಾಮೀನು ನೀಡಿದ್ದು ಕಾಟನ್ ಪೇಟೆ ಪ್ರಕರಣದಲ್ಲಿ ಇನ್ನೂ ಜಾಮೀನು ದೊರೆಯದಿರುವುದರಿಂದ ಡ್ರಗ್ ಪೆಡ್ಲರ್ ವೀರೇನ್ ಖನ್ನಾಗೆ ಜೈಲಿನಿಂದ ಬಿಡುಗಡೆಯ ಭಾಗ್ಯ ದೊರೆತಿಲ್ಲ.
ಡ್ರಗ್ಸ್ ಜಾಲದ ತನಿಖೆ ಕೈಗೊಂಡಿದ್ದ ಸಿಸಿಬಿ ಅಧಿಕಾರಿಗಳು ಮೊದಲು ಬಾಣಸವಾಡಿ ಠಾಣೆಯಲ್ಲಿ ದಾಖಲಾದ ಪ್ರಕರಣದ ಸಂಬಂಧ ಪೆಡ್ಲರ್ ವೀರೇನ್ ಖನ್ನಾನನ್ನು ಬಂಧಿಸಿದ್ದರು.
ವಿಚಾರಣೆ ಬಳಿಕ ನ್ಯಾಯಾಂಗ ಬಂಧನದಲ್ಲಿದ್ದ ಖನ್ನಾನನ್ನು ಬಳಿಕ ಕಾಟನ್ ಪೇಟೆ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಾಡಿ ವಾರೆಂಟ್‌ಗೆ ಮನವಿ ಮಾಡಿದ್ದರು. ನಂತರ ಕೋರ್ಟ್ ಆದೇಶದಂತೆ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು.
ಬಂಧಿತ ಖನ್ನಾ ಪರ ವಕೀಲರು, ಬಾಣಸವಾಡಿ ಪ್ರಕರಣದ ಸಂಬಂಧ ಸೆಷನ್ಸ್ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಸೆಷನ್ಸ್ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ತಿರಸ್ಕೃತಗೊಂಡಿತ್ತು.
ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು ಹೈಕೋರ್ಟ್, ಬಾಣಸವಾಡಿ ಪ್ರಕರಣದಲ್ಲಿ ಜಾಮೀನು ನೀಡಿದೆ. ಆದರೆ ಕಾಟನ್ ಪೇಟೆ ಪ್ರಕರಣದ ಅರ್ಜಿ ವಿಚಾರಣೆ ಇನ್ನೂ ಪ್ರಗತಿಯಲ್ಲಿರುವ ಕಾರಣ ವೀರೇನ್ ಖನ್ನಾ ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುವುದು ಅನಿವಾರ್ಯವಾಗಿದೆ.