ಡ್ರಗ್ಸ್ ಸೇರಿ 140 ಪ್ರಕರಣ ಪತ್ತೆ 310 ಮಂದಿ ಸೆರೆ

ಬೆಂಗಳೂರು, ಫೆ.೧೩-ರಾಜಧಾನಿ ಬೆಂಗಳೂರಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳಿಗೆ ಸಂಪೂರ್ಣ ನಿಯಂತ್ರಣ ಹಾಕಲು ಮೊದಲ ಹೆಜ್ಜೆಯಿಟ್ಟಿರುವ ಬೆಂಗಳೂರಿನ ಪೊಲೀಸರು ಹೊಸ ವರ್ಷದ ಮೊದಲ ತಿಂಗಳಿನಲ್ಲಿಯೇ ಡ್ರಗ್ಸ್ ಸೇರಿದಂತೆ ಒಟ್ಟು ೧೪೦ ಪ್ರಕರಣಗಳಲ್ಲಿ ೩೧೦ ಮಂದಿಯನ್ನು ಬಂಧಿಸಿ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಗರದಲ್ಲಿಂದು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಜನವರಿ ತಿಂಗಳಿನಲ್ಲಿಯೇ ೩೬ ಎನ್.ಡಿ.ಪಿ.ಎಸ್ ಪ್ರಕರಣಗಳನ್ನು ದಾಖಲು ಮಾಡಿದ್ದು, ೮ ವಿದೇಶಿ ಪ್ರಜೆಗಳು ಸೆರಿದಂತೆ ಒಟ್ಟು ೫೭ ವ್ಯಕ್ತಿಗಳನ್ನು ವಶಕ್ಕೆ ಪಡೆಯಲಾಗಿದೆ. ಇವರುಗಳಿಂದ ವಿವಿಧ ರೀತಿಯ ೮೫ ಕೆ.ಜಿ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮುಂಜಾಗ್ರತಾ ಕ್ರಮದ ಅಡಿಯಲ್ಲಿ ಒಟ್ಟು ೧೬೪ ಪಿ.ಎ.ಆರ್ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಇದರಲ್ಲಿ ಮುಚ್ಚಳಿಕೆ ಉಲ್ಲಂಘನೆ ಮಾಡಿದ ೩ ವ್ಯಕ್ತಿಗಳ ವಿರುದ್ದ ಬಾಂಡ್ ಮೌಲ್ಯದ ಮೊತ್ತವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ತಲೆ ಮರೆಸಿಕೊಂಡಿದ್ದ ೧೩ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಮಾಡಿ ಘನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ವಿವರಿಸಿದರು.

ಇನ್ನೂ, ತಲೆಮರೆಸಿಕೊಂಡಿದ್ದ ೯ ಆರೋಪಿಗಳನ್ನು ಪತ್ತೆ ಮಾಡಿ ೧೭೪ಎ ಐಪಿಸಿ ಅಡಿಯಲ್ಲಿ ಪ್ರಕರಣಗಳನ್ನು ದಾಖಲು ಮಾಡಿದ್ದು, ಹೀಗೆ ೨೪ ಆರೋಪಿಗಳನ್ನು ಪತ್ತೆ ಮಾಡಿ ೨೨೯ಎ ಐಪಿಸಿ ಪ್ರಕರಣ ದಡಿಯಲ್ಲಿ ಬಂಧಿಸಲಾಗಿದೆ.

ಇನ್ನೂ, ರೌಡಿಗಳ ವಿರುದ್ದ ಮುಂಜಾಗ್ರತ ಕ್ರಮದ ಅಡಿಯಲ್ಲಿ ಒಟ್ಟು ೧೧೫ ಪಿಎಆರ್ ಪ್ರಕರಣಗಳನ್ನು ದಾಖಲಿಸಿ, ೨೨೯ಎ ಐಪಿಸಿ ಕಾಯ್ದೆಯಡಿ ೫ ಪ್ರಕರಣಗಳನ್ನು ಹಾಗೂ ೧೭೪ಎ ಐಪಿಸಿ ಅಡಿಯಲ್ಲಿ ೫ ಪ್ರಕರಣಗಳು ದಾಖಲಿಸಲಾಗಿದೆ. ತಲೆ ಮರೆಸಿಕೊಂಡಿರುವ ರೌಡಿಗಳ ಪೈಕಿ ೧೦ ರೌಡಿಗಳನ್ನು ಪತ್ತೆ ಮಾಡಿ, ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಅವರು ಹೇಳಿದರು.

ಜನವರಿ ತಿಂಗಳಿನಲ್ಲಿ ಒಟ್ಟಾರೆ ೧೩೦೮ ಪ್ರಕರಣಗಳು ವಿಚಾರಣೆ ಪೂರೈಸಿ ೭೬೨ ಪ್ರಕರಣಗಳು ಶಿಕ್ಷೆಗೆ ಘನ ನ್ಯಾಯಾಲಯವು ಆದೇಶಿಸಿದೆ. ಮತ್ತೊಂದೆಡೆ, ಸಿಸಿಬಿ ಪೊಲೀಸರು ಇಬ್ಬರು ಅಂತರರಾಷ್ಟ್ರೀಯ ಡ್ರಗ್ ಪೆಡ್ಲರ್ (ವಿದೇಶಿ ಪ್ರಜೆಗಳು) ಗಳನ್ನು ವಶಕ್ಕೆ ಪಡೆದು, ಸುಮಾರು ೫೦ ಲಕ್ಷ ಮೊತ್ತದ ೫೦೫ ಗ್ರಾಂ ತೂಕದ ಎಂ.ಡಿ.ಎಂ.ಎ, ಕ್ರಿಸ್ಟಲ್‌ನ್ನು ಜಪ್ತಿ ಮಾಡಿದ್ದಾರೆ.ಮತ್ತೊಂದು ಪ್ರಕರಣದಲ್ಲಿಯೂ ವಿದೇಶಿ ಪ್ರಜೆಗಳು ಗಳನ್ನು ವಶಕ್ಕೆ ಪಡೆದು, ಸುಮಾರು ೭೧ ಲಕ್ಷ ಮೊತ್ತದ ೧೦೦ ಗ್ರಾಂ ತೂಕದ ಕೊಕೈನ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಸೈಬರ್ ಪ್ರಕರಣಗಳ ಪತ್ತೆಗಾಗಿ ಡಿಸಿಪಿ ನೇತೃತ್ವದಲ್ಲಿ ವಿಶೇಷ ತಂಡಗಳನ್ನು ರಚನೆ ಮಾಡಲಾಗಿರುತ್ತದೆ. ಕೋರಿಯರ್ ಹೆಸರಿನಲ್ಲಿ ವಂಚಿಸುತ್ತಿದ್ದ ಜಾಲವನ್ನು ಪತ್ತೆಮಾಡಿ ೧೪ ಆರೋಪಿಗಳನ್ನು ಬಂಧಿಸಿ ದೇಶಾದ್ಯಂತ ದಾಖಲಾಗಿರುವ ಒಟ್ಟು ೫೪೬ ಪ್ರಕರಣಗಳನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

ಸಾರ್ವಜನಿಕರಿಗೆ ವಾಟ್ಸಪ್ ಮತ್ತು ಟೆಲಿಗ್ರಾಮ್ ಆಪ್‌ಗಳ ಮುಖಾಂತರ ‘ವರ್ಕ್ ಫ್ರಮ್ ಹೋಮ್‘ ಕೆಲಸ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಲಕ್ಷಾಂತರ ಹಣವನ್ನು ಹೂಡಿಕೆ ಮಾಡಿಸಿ ವಂಚಿಸುತ್ತಿದ್ದ ೯ ಜನ ಅಂತರಾಜ್ಯ ಆರೋಪಿಗಳನ್ನು ಸೈಬರ್ ಪೊಲೀಸರು ಬಂಧಿಸಿರುತ್ತಾರೆ. ೩೦ ಬ್ಯಾಂಕ್ ಖಾತೆಗಳನ್ನು ಪ್ರೀಜ್ ಮಾಡಲಾಗಿದ್ದು, ಪ್ರೀಜ್ ಮಾಡಲಾಗಿರುವ ಮೊತ್ತವು ೬೨,೮೩,೦೮೦ ರೂಪಾಯಿ ಆಗಿದೆ ಎಂದು ಆಯುಕ್ತರು ಹೇಳಿದರು.

ಬೆಂಗಳೂರು ನಗರದ ಸಿಸಿಬಿ ಪೊಲೀಸರು ಅಕ್ರಮ ಕುದುರೆ ರೇಸ್ ಬೆಟ್ಟಿಂಗ್ ಸ್ಟಾಲ್‌ಗಳ ಮೇಲೆ ದಾಳಿ ಮಾಡಿ ಅನಧಿಕೃತ ರೇಸ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿಕೊಂಡು, ಸರ್ಕಾರದ ಬೊಕ್ಕಸಕ್ಕೆ ತೆರಿಗೆ ವಂಚಿಸುತ್ತಿದ್ದ ೬೬ ವ್ಯಕ್ತಿಗಳನ್ನು ವಶಕ್ಕೆ ಪಡೆದು ಕೃತ್ಯಕ್ಕೆ ಬಳಸಿದ್ದ ೫೫ ಮೊಬೈಲ್‌ಗಳು ಮತ್ತು ೩.೪೫ ಕೋಟಿ ಜಪ್ತಿ ಮಾಡಲಾಗಿದೆ. ಹೀಗೆ ವಿವಿಧ ಪ್ರಕರಣಗಳಲ್ಲಿ ಒಂದೇ ತಿಂಗಳಿನಲ್ಲಿ ಹಲವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಅವರು ವಿವರಿಸಿದರು.