ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣಕ್ಕೆ ರಾಜಕೀಯ ಇಚ್ಛಾಶಕ್ತಿ ಅಗತ್ಯ

ಮಂಗಳೂರು, ಅ.೨೭-ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕು. ಸಮಾಜಕ್ಕೆ ಬದ್ಧತೆ ಮತ್ತು ಆಸಕ್ತಿಯೂ ಬೇಕು. ಕೇವಲ ಪೊಲೀಸರಿಂದ ಡ್ರಗ್ಸ್ ದಂಧೆಯನ್ನು ಮಟ್ಟ ಹಾಕಲು ಸಾಧ್ಯವಾಗುವುದಿಲ್ಲ ಎಂದು ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ವೈ. ಹೇಳಿದ್ದಾರೆ.
ಅವರು ಇಲ್ಲಿನ ಟೈಗರ್ ಸರ್ಕಲ್‌ನಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಯುವಮೋರ್ಚಾ ವವತಿಯಿಂದ ಡ್ರಗ್ಸ್ ಮುಕ್ತ ಉಡುಪಿ ಅಭಿಯಾನದಲ್ಲಿ ಬೀದಿ ನಾಟಕ ಮತ್ತು ಬೀದಿ ನೃತ್ಯ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಎಲ್ಲೆಡೆ ಕೋವಿಡ್-೧೯ ಸೋಂಕು ವ್ಯಾಪಿಸುವಾಗ ನಾವು ಎಲ್ಲರಿಗೂ ರೋಗ ನಿರೋಧಕ ಶಕ್ತಿಯನ್ನು ಜಾಸ್ತಿ ಮಾಡಲು ಕೇಳಿಕೊಳ್ಳುತ್ತಿದ್ದರೆ, ಯಾವ ಸುಳಿವೂ ಇಲ್ಲದೇ ಬಹಳ ದೊಡ್ಡ ಸಂಖ್ಯೆಯಲ್ಲಿ ಯುವಕರು ಮಾದಕ ವಸ್ತುಗಳಿಗೆ ಬಲಿಯಾಗುತ್ತಿರುವ ಮಾಹಿತಿ ಗುಪ್ತಚರ ಇಲಾಖೆಯಿಂದ ಸಿಕ್ಕಿದೆ. ಯುವ ಜನತೆ ಮೋಜಿಗಾಗಿ, ಖಿನ್ನತೆಯಿಂದ, ಒತ್ತಡವನ್ನು ನಿರ್ವಹಿಸಲು, ಕುತೂಹಲದಿಂದ ಮಾದಕ ವಸ್ತುಗಳನ್ನು ಬಳಸುತ್ತಾರೆ. ಇದು ಮುಂದೆ ಕ್ರಿಮಿನಲ್ ಚಟುವಟಿಕೆಗಳತ್ತ ವಾಲುತ್ತದೆ. ಯುವಕರು ಅಪರಾಧ ಕೃತ್ಯಗಳನ್ನು ನಡೆಸುತ್ತಾರೆ. ಡ್ರಗ್ಸ್‌ಗೆ ಬಲಿಯಾದ ಯುವಕರು ದಾರಿ ತಪ್ಪುತ್ತಿದ್ದಾರೆ ಎಂದು ಎಚ್ಚರಿಸಿದರು.
ಜಾಗತಿಕವಾಗಿ ನಡೆಯುವ ಭಯೋತ್ಪಾದನೆಗೆ ಹೂಡಿಕೆಯಾಗು ತ್ತಿರುವುದೇ ಈ ಡ್ರಗ್ಸ್ ಜಾಲದಿಂದ. ಅದರಿಂದ ಬರುವ ಹಣವನ್ನೇ ಉಗ್ರರು ತಮ್ಮ ಚಟುವಟಿಕೆಗಳಿಗೆ ಬಳಸುತ್ತಿದ್ದಾರೆ. ನಮ್ಮೂರಿಗೆ ಶಿಕ್ಷಣದ ಸಲುವಾಗಿ ಬಂದ ಬೇರೆ ರಾಜ್ಯ, ಊರುಗಳ ವಿದ್ಯಾರ್ಥಿಗಳು ಡ್ರಗ್ಸ್ ಬಳಸುತ್ತಿದ್ದಾರೆ ಎನ್ನಲಾಗುವುದಿಲ್ಲ. ಬಳಸುವವರು ಅವರಾದರೂ ಪೆಡ್ಲರ್‌ಗಳು ನಮ್ಮ ಊರಿನಲ್ಲಿದ್ದುಕೊಂಡೇ ಡ್ರಗ್ಸ್ ಸರಬರಾಜು ಮಾಡುತ್ತಾರೆ. ನಮ್ಮ ಮಕ್ಕಳು ಬಲಿಯಾಗುವ ಮೊದಲು ನಾವು ಅದನ್ನು ತಡೆಯಬೇಕಾಗಿದೆ ಎಂದು ಡಾ. ಭರತ್ ಶೆಟ್ಟಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಡ್ರಗ್ಸ್ ಮುಕ್ತ ಭಾರತ ನಿರ್ಮಾಣ ಮಾಡಲು ಝೀರೋ ಟಾಲರೆನ್ಸ್ ಆಗಿರಬೇಕು ಎಂದು ಹೇಳಿದ್ದರು. ಪ್ರಸ್ತುತ ರಾಜ್ಯದಲ್ಲಿ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಡ್ರಗ್ಸ್ ದಂಧೆಯನ್ನು ಮಟ್ಟ ಹಾಕುವುದಕ್ಕೆ ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿzರೆ. ಸಮಾಜ, ಹೆತ್ತವರು, ಶಿಕ್ಷಕರು ಎಲ್ಲರೂ ಜೊತೆಗೂಡಿ ಕೆಲಸ ಮಾಡದಿದ್ದರೆ, ಕೇವಲ ಪೊಲೀಸರಿಂದ ಇದನ್ನು ಮಟ್ಟ ಹಾಕಲು ಸಾಧ್ಯವಿಲ್ಲ. ಮಕ್ಕಳೊಂದಿಗೆ ಆತ್ಮೀಯತೆಯಿಂದ ಮಾತಾಡಿ, ಆರಂಭಿಕ ಹಂತದಲ್ಲಿಯೇ ಇದನ್ನು ತಡೆಯಬೇಕು ಎಂದು ಶಾಸಕ ಡಾ. ಭರತ್ ಶೆಟ್ಟಿ ಸಲಹೆ ನೀಡಿದರು.
ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮಾತನಾಡಿ, ಭಾರತದಲ್ಲಿ ಅತೀ ಹೆಚ್ಚು ಡ್ರಗ್ಸ್ ಬಳಕೆಯಾಗುತ್ತಿರುವುದು ಪಂಜಾಬ್‌ನಲ್ಲಿ. ಪಾಕ್ ಗಡಿಯಲ್ಲಿರುವ ರಾಜ್ಯದಲ್ಲಿ ಚಾಲಕರು ಡ್ರಗ್ ಸೇವಿಸಿಯೇ ಬಸ್ಸು ಚಲಾಯಿಸುತ್ತಾರೆ. ಇಂತಹ ಪರಿಸ್ಥಿತಿ ಅಲ್ಲಿದೆ. ನಮ್ಮ ಜಿಲ್ಲೆಗಳಲ್ಲಿ ಮಕ್ಕಳು ಮಾದಕ ವಸ್ತುಗಳ ಜಾಲಕ್ಕೆ ಬಲಿಯಾಗದಂತೆ ಜಾಗೃತ ರಾಗಬೇಕು. ನಮ್ಮ ಮನೆ ಬಾಗಿಲಿಗೆ ಬರುವ ಮೊದಲೇ ಎಚ್ಚೆತ್ತುಕೊಳ್ಳಬೇಕು ಎಂದರು.
ಬಿಜೆಪಿ ಯುವಮೋರ್ಚಾ ಜಿಧ್ಯಕ್ಷ ವಿಖ್ಯಾತ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಬಿಜೆಪಿ ಉಪಾಧ್ಯಕ್ಷರಾದ ಶ್ರೀಶ ನಾಯಕ್, ಯಶಪಾಲ ಸುವರ್ಣ, ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ಪಕ್ಷದ ಪ್ರಮುಖರಾದ ಶರತ್ ಶೆಟ್ಟಿ, ರವೀಂದ್ರ ಮಡಿವಾಳ, ವೀಣಾ ಶೆಟ್ಟಿ, ಶೀಲಾ ಕೆ. ಶೆಟ್ಟಿ, ಗೀತಾಂಜಲಿ ಸುವರ್ಣ, ಶ್ವೇತಾ ಪೂಜರಿ, ನಯನಾ ಗಣೇಶ್ ಮೊದಲಾದವರಿದ್ದರು.