ಡ್ರಗ್ಸ್ ಮಾರಾಟ ವಿದೇಶಿ ಪ್ರಜೆ ಸೆರೆ

ಬೆಂಗಳೂರು,ಮಾ.೨೦-ಉದ್ಯಮಿಗಳಿಗೆ, ಕಾಲೇಜ್ ವಿದ್ಯಾರ್ಥಿಗಳಿಗೆ ಹಾಗೂ ಗಿರಾಕಿಗಳಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಯೊಬ್ಬನನ್ನು ಡಿಜೆ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಹೆಬ್ಬಾಳ ಕೆಂಪಾಪುರದ ಚಿರಂಜೀವಿ ಲೇಔಟ್ ನ ಜೇಮ್ಸ್ ಕೆಲ್ವಿನ್ (೩೩)ಬಂಧಿತ ಆರೋಪಿಗಳಾಗಿದ್ದಾರೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ.ಶರಣಪ್ಪ ತಿಳಿಸಿದ್ದಾರೆ.
ಬಂಧಿತನಿಂದ ೯ ಲಕ್ಷ ಮೌಲ್ಯದ ೬೦ ಗ್ರಾಂ ಕೊಕೇನ್, ವೇಯಿಂಗ್ ಮೆಷಿನ್, ಐ-ಫೋನ್ ಮೊಬೈಲ್, ಸ್ಯಾಮ್‌ಸಂಗ್ ಐಫ್ಯಾಡ್, ಕೊರೊಲಾ ಮಾಡೆಲ್ ಕಾರ್ ನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯು ಈಗಾಗಲೇ ಬಂಧಿತನಾಗಿರುವ ವಿದೇಶಿ ಪ್ರಜೆ ಜಾನ್ ಪೆಡ್ಲರ್ ಜೊತೆ ಸೇರಿ ಕೆಜಿ ಹಳ್ಳಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಎಂದರು.
ಆರೋಪಿಯು ಮಾದಕವಸ್ತುಗಳ ಮಾರಾಟದ ಸಂಶಯದ ಮೇಲೆ ದಾಳಿ ನಡೆಸಿದರೆ ವಾಸಿಸುವ ಮನೆಯ ಶೌಚಾಲಯದ ಕಮೋಡ್ ನಲ್ಲಿ ಹಾಕಿ ನಾಶಪಡಿಸಿ ಚಾಣಾಕ್ಷತೆಯಿಂದ ತಪ್ಪಿಸಿಕೊಳ್ಳುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಶರಣಪ್ಪ ತಿಳಿಸಿದರು.
ಬಂಧಿತ ಆರೋಪಿ ಜಾನ್ ಪೆಡ್ಲರ್ ನೀಡಿದ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡು ಬಂಧಿಸಲಾಗಿದೆ ಎಂದು ಹೇಳಿದರು.