ಡ್ರಗ್ಸ್ ಮಾರಾಟ ಇಬ್ಬರು ನೈಜೀರಿಯಾ ಪ್ರಜೆಗಳ ಸೆರೆ

ಬೆಂಗಳೂರು,ಅ.೨೭- ಗಾಂಜಾ ಎಂಡಿಎಂಎ, ಇತರ ಕೆಮಿಕಲ್ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರು ನೈಜೀರಿಯಾ ಪ್ರಜೆಗಳನ್ನು ಬಂಧಿಸಿರುವ ಕಾಡುಗೋಡಿ ಪೊಲೀಸರು ೩೦೦ ಗ್ರಾಂ ಗಾಂಜಾ ಇತರ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ನೈಜೀರಿಯಾ ಮೂಲದ ಬಂಜಾರ ಲೇಔಟ್ ೧ನೇ ಕ್ರಾಸ್ ನ ಚಿಕ್ವಾಡ್ ವಿನ್ಸೆಂಟ್ ಒಗಿಬೊ (೩೦) ಹಾಗೂ ನೈಜೀರಿಯಾದ ಅನಂಬ್ರಾ ರಾಜ್ಯದ ಕೆ.ಆರ್.ಪುರಂನ ಟಿ.ಸಿ.ಪಾಳ್ಯದ ಎಮೆಕಾ ಚಿನೆಡು ಮಿಷೆಲ್ (೪೫) ಬಂಧಿತ ಆರೋಪಿಗಳಾಗಿದ್ದಾರೆ. ಕಾಡುಗೋಡಿಯ ಕೋಡಿಗೇಹಳ್ಳಿ-ಹೂಡಿ ರೈಲ್ವೆ ನಿಲ್ದಾಣದ ಕಡೆ ಹೋಗುವ ರಸ್ತೆ ಬದಿಯ ಖಾಲಿ ಜಾಗದಲ್ಲಿ ಇಬ್ಬರು ವ್ಯಕ್ತಿಗಳು, ಬೈಕ್ ನಿಲ್ಲಿಸಿಕೊಂಡು ಬ್ಯಾಗ್ ನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪಡೆದ ಕಾಡಗೋಡಿ ಪೊಲೀಸ್ ಇನ್ಸ್‌ಪೆಕ್ಟರ್ ನರೇಂದ್ರ ಕುಮಾರ್ ಮತ್ತವರ ತಂಡ ದಾಳಿ ನಡೆಸಿ ಆರೋಪಿಗಳನ್ನು ಮಾಲು ಸಮೇತ ಬಂಧಿಸಿದೆ.
ಆರೋಪಿಗಳಿಂದ ೩೦೦ ಗ್ರಾಂ ಗಾಂಜಾ, ಎಂಡಿಎಂಎ, ಇತರ ಕೆಮಿಕಲ್ ಡ್ರಗ್, ನಾಲ್ಕು ಮೊಬೈಲ್ ಫೋನ್, ತೂಕ ಮಾಡುವ ಯಂತ್ರ, ಒಂದು ಯಮಹಾ ಎಫ್ ಜಡ್ ಮೋಟಾರ ಸೈಕಲ್, ೧೦೦೦ ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಒಂದನೇ ಆರೋಪಿ ವಿನ್ಸೆಂಟ್ ಈ ಹಿಂದೆ ಕೆ.ಆರ್.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣದ ಒಂದರ ಆರೋಪಿಯಾಗಿದ್ದಾನೆ ಎಂದು ವೈಟ್ ಫೀಲ್ಡ್ ಡಿಸಿಪಿ ದೇವರಾಜ್ ತಿಳಿಸಿದ್ದಾರೆ.


ವೃದ್ಧೆ ಸರ ಕಸಿದು ಪರಾರಿ
ಬೆಂಗಳೂರು,ಅ.೨೭-ನಗರ ದಲ್ಲಿ ಮತ್ತೆ ಸರಗಳ್ಳರ ಹಾವಳಿ ಆರಂಭವಾಗಿದ್ದು ಬೈಕ್ ನಲ್ಲಿ ಬಂದ ದುಷ್ಕರ್ಮಿಯೊಬ್ಬ ವೃದ್ಧೆಯೊಬ್ಬರನ್ನು ಕೆಳಗೆ ತಳ್ಳಿ ಚಿನ್ನದ ಸರ ಕಸಿದು ಪರಾರಿಯಾಗಿರುವ ಘಟನೆ ಕೆಂಗೇರಿಯ ವಲಗೇರಹಳ್ಳಿ ಮುಖ್ಯರಸ್ತೆಯಲ್ಲಿ ನಡೆದಿದೆ. ಆಯುಧಪೂಜೆ ಹಿನ್ನೆಲೆಯಲ್ಲಿ ನಿನ್ನೆ ವೃದ್ಧೆ ಸರೋಜಮ್ಮ ಅವರು ಪೂಜಾಸಾಮಗ್ರಿ ತರಲು ವಲಗೇರಹಳ್ಳಿ ಮುಖ್ಯರಸ್ತೆಯಲ್ಲಿ ನಡೆದುಕೊಂಡು ಹೋಗು ತ್ತಿದ್ದರು. ಈ ವೇಳೆ ಹಿಂದಿಯಿಂದ ಬೈಕ್ ನಲ್ಲಿ ಬಂದ ದುಷ್ಕರ್ಮಿ ಕ್ಷಣಾರ್ಧದಲ್ಲಿ ಕುತ್ತಿಗೆಯಲ್ಲಿದ್ದ ಸರ ಎಗರಿಸಿ ದೂರ ತಳ್ಳಿ ಪರಾರಿಯಾಗಿದ್ದಾನೆ. ಆರೋಪಿ ಚಿನ್ನದ ಸರ ಕಸಿದು ತಳ್ಳಿದ ರಭಸಕ್ಕೆ ಸರೋಜಮ್ಮ ಅವರು ಕಳೆಗೆ ಬಿದ್ದಿದ್ದು ಮೊಣಕೈ ಹಾಗೂ ಕಾಲುಗಳಿಗೆ ಗಾಯಗಳಾಗಿವೆ. ಗಾಯಾಳು ವೃದ್ಧೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗಿದೆ.ಆರೋಪಿಯ ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಸಂಬಂಧ ಕೆಂಗೇರಿ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.