ಡ್ರಗ್ಸ್ ಪರೀಕ್ಷೆಗೆ ಪ್ರತ್ಯೇಕ ಎಫ್‌ಎಸ್‌ಎಲ್ ಹೈಕೋರ್ಟ್ ಸಲಹೆ

ಬೆಂಗಳೂರು,ಏ.೪- ಮಾದಕ ವಸ್ತುಗಳು ಮತ್ತು ನಿಷೇಧಿತ ಪದಾರ್ಥಗಳ ಪರೀಕ್ಷೆಗೆ ಪ್ರತ್ಯೇಕ ವಿಧಿ ವಿಜ್ಞಾನ ಪ್ರಯೋಗಾಲಯ
(ಎಫ್‌ಎಸ್‌ಎಲ್) ತೆರೆಯುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದೆ.
ಇದೇ ವೇಳೆ ಪೊಲೀಸ್ ಠಾಣೆಗಳಿಗೆ ಸ್ಥಳ ಪರೀಕ್ಷೆ ಕಿಟ್ (ಫೀಲ್ಡ್ ಟೆಸ್ಟ್ ಕಿಟ್) ನೀಡುವ ಸಂಬಂಧ ಗೃಹ ಇಲಾಖೆ ಕೋರುವಂತೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ಗೆ ನಿರ್ದೇಶಿಸಿದೆ.
ಎನ್‌ಡಿಪಿಎಸ್ ಕಾಯ್ದೆ ಅಡಿ ದಾಖಲಾಗಿರುವ ಪ್ರಕರಣದಲ್ಲಿ ಜಾಮೀನು ಕೋರಿ ಆರೋಪಿ ಅರ್ಜುನ್ ದೀಪಕ್ ಮೆಹ್ತಾ ಎಂಬಾತ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾ. ಕೆ. ನಟರಾಜನ್ ಅವರಿದ್ದ ಏಕಸದಸ್ಯ ಪೀಠ ಈ ಸಲಹೆ ಮತ್ತು ನಿರ್ದೇಶನ ನೀಡಿದೆ.
ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಆರೋಪಿ ಪರ ವಕೀಲರು ವಾದಿಸಿ, ಜೀವನ್ ಬಿಮಾನಗರ ಠಾಣೆ ಪೊಲೀಸರು ನಿಷೇಧಿತ ವಸ್ತು ದೊರೆತಾಗ ಫೀಲ್ಡ್ ಟೆಸ್ಟ್ ನಡೆಸಿರಲಿಲ್ಲ. ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಮಾರ್ಗಸೂಚಿಗಳ ಪ್ರಕಾರ ವಶಪಡಿಸಿಕೊಂಡ ವಸ್ತುಗಳನ್ನು ೭೨ ಗಂಟೆಗಳಲ್ಲಿ ರಾಸಾಯನಿಕ ವಿಶ್ಲೇಷಣೆಗೆ ಕಳುಹಿಸಬೇಕು. ಅದರಂತೆ ಎಫ್‌ಎಸ್‌ಎಲ್ ಕೇಂದ್ರ ೧೫ ದಿನಗಳಲ್ಲಿ ವರದಿ ಸಲ್ಲಿಸಬೇಕು. ಆದರೆ ಪೊಲೀಸರು ನಿಗದಿತ ಅವಧಿಯಲ್ಲಿ ವರದಿ ಪಡೆದಿಲ್ಲ. ಹೀಗಾಗಿ ಜಾಮೀನು ನೀಡಬೇಕು ಎಂದು ಕೋರಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಪೀಠ, ವಶಪಡಿಸಿಕೊಂಡಿರುವ ನಿಷೇಧಿತ ವಸ್ತುಗಳು ವಾಣಿಜ್ಯ ಪ್ರಮಾಣಕ್ಕಿಂತ ಹೆಚ್ಚಾಗಿವೆ. ತನಿಖೆ ಪ್ರಗತಿಯಲ್ಲಿ ಇರುವುದರಿಂದ ಜಾಮೀನು ನೀಡುವುದು ಸಾಧ್ಯವಿಲ್ಲ ಎಂದು ಅರ್ಜಿ ವಜಾ ಮಾಡಿದೆ. ಇದೇ ವೇಳೆ ಸರ್ಕಾರಕ್ಕೆ ಸಲಹೆ ನೀಡಿರುವ ಪೀಠ, ಇಡೀ ರಾಜ್ಯದಲ್ಲಿ ಒಂದೇ ಒಂದು ಎಫ್‌ಎಸ್‌ಎಲ್ ಕೇಂದ್ರ ಇರುವ ಕಾರಣ ನಿಗದಿತ ೧೫ ದಿನಗಳಲ್ಲಿ ವರದಿ ಲಭ್ಯವಾಗುತ್ತಿಲ್ಲ.
ಹೀಗಾಗಿ ಮಾದಕವಸ್ತುಗಳ ಪರೀಕ್ಷೆಗೆ ಪ್ರತ್ಯೇಕ ಎಫ್‌ಎಸ್‌ಎಲ್ ಕೇಂದ್ರ ಸ್ಥಾಪಿಸಲು ಮತ್ತು ಠಾಣಾವಾರು ಫೀಲ್ಡ್ ಟೆಸ್ಟ್ ಕಿಟ್ ನೀಡಲು ಸರ್ಕಾರ ಮುಂದಾಗಬೇಕು ಎಂದಿದೆ. ಹಾಗೆಯೇ, ಈ ಸಂಬಂಧ ವಿಶೇಷ ಅಭಿಯೋಜಕರು ಮನವಿ ಸಲ್ಲಿಸಿ ಗೃಹ ಇಲಾಖೆ ಮನವೊಲಿಸುವ ಪ್ರಯತ್ನ ಮಾಡಬೇಕು. ಆದೇಶದ ಪ್ರತಿಯನ್ನು ಸರ್ಕಾರದ ಮುಖ್ಯದರ್ಶಿ ಹಾಗೂ ಗೃಹ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿಗೆ ತಲುಪಿಸಬೇಕು ಎಂದು ನಿರ್ದೇಶಿಸಿದೆ.