ಡ್ರಗ್ಸ್ ನಂಟು ನಟಿ ಅನುಶ್ರೀಗೆ ಸಂಕಟ

ಮಂಗಳೂರು,ಸೆ.೮- ಡ್ರಗ್ಸ್ ಸೇವನೆ ಹಾಗೂ ಸಾಗಾಟ ಮಾಡುತ್ತಿರುವುದು ಆರೋಪಪಟ್ಟಿಯಲ್ಲಿ ಉಲ್ಲೇಖ ಗೊಂಡಿರುವುದರಿಂದ ಖ್ಯಾತ ನಿರೂಪಕಿ ಹಾಗೂ ನಟಿ ಅನುಶ್ರೀಗೆ ಸಂಕಷ್ಟ ಎದುರಾಗಿದೆ.
ಡ್ರಗ್ಸ್ ಸೇವನೆ ಜತೆಗೆ ಸಾಗಾಟ ಮಾಡುತ್ತಿದ್ದರು ಎಂದು ಪ್ರಕರಣದ ಎರಡನೇ ಆರೋಪಿಯಾಗಿರುವ ಕಿಶೋರ್ ಅಮನ್ ಶೆಟ್ಟಿ ಹೇಳಿಕೆಯನ್ನು ಉಲ್ಲೇಖ ಮಾಡಿ ಆರೋಪಪಟ್ಟಿ ಸಲ್ಲಿಸಿರುವುದು ನಿರೂಪಕಿ ಅನುಶ್ರೀ ಸಂಕಟ ತಂದೊಡ್ಡಿದೆ.
ಕಿಶೋರ್ ಶೆಟ್ಟಿ ನೀಡಿರುವ ಹೇಳಿಕೆಯಂತೆ, ಅವರ ರೂಮ್‌ಗೆ ಅನುಶ್ರೀ ಡ್ರಗ್ಸ್ ತರುತ್ತಿದ್ದರು. ಕಿಶೋರ್, ತರುಣ್ ಜೊತೆ ಸಾಕಷ್ಟು ಬಾರಿ ಅನುಶ್ರೀ ಕೂಡ ಡ್ರಗ್ಸ್ ಸೇವನೆ ಮಾಡಿದ್ದರು ಎಂದು ಹೇಳಿಕೆಯಲ್ಲಿ ದಾಖಲಿಸಲಾಗಿದೆ.
ಮಾದಕ ದ್ರವ್ಯ ಸಾಗಾಟದೊಂದಿಗೆ ಸ್ನೇಹಿತರೊಂದಿಗೆ ಡ್ರಗ್ ಪಾರ್ಟಿ ಮತ್ತು ಪಾರ್ಟಿಗೆ ಡ್ರಗ್ಸ್ ತರುತ್ತಿದ್ದರು. ತರುಣ್, ನಾನು ಹಾಗೂ ಅನುಶ್ರೀ ಡ್ರಗ್ ಪಾರ್ಟಿ ಮಾಡುತ್ತಿದ್ದೆವು ಎಂದು ಉಲ್ಲೇಖಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಎರಡನೇ ಆರೋಪಿ ಕಿಶೋರ್ ಶೆಟ್ಟಿಯನ್ನು ಉಲ್ಲೇಖಿಸಲಾಗಿದೆ. ರಿಯಾಲಿಟಿ ಶೋನ ಕೊರಿಯೋಗ್ರಾಫರ್ ಆಗಿದ್ದ ತರುಣ್ ಮುಖಾಂತರ ನನಗೆ ಅನುಶ್ರೀ ಪರಿಚಯವಾಗಿತ್ತು. ತರುಣ್ ರೂಮ್‌ನಲ್ಲಿ ತಡರಾತ್ರಿವರೆಗೂ ಅನುಶ್ರೀಗೆ ನೃತ್ಯ ತರಬೇತಿ ಮಾಡಿಸುತ್ತಿದ್ದೆವು.
ನೃತ್ಯ ತರಬೇತಿಗೆ ಬರುವಾಗ ಅನುಶ್ರೀ ಎಕ್ಸ್‌ಟಸಿ ಡ್ರಗ್ಸ್ ಖರೀದಿಸಿ ತರುತ್ತಿದ್ದರು. ನಮಗೆ ಎಕ್ಸ್‌ಟಸಿ ಡ್ರಗ್ಸ್ ನೀಡಿ ಅನುಶ್ರೀ ಕೂಡ ಸೇವಿಸುತ್ತಿದ್ದರು.
ಅನುಶ್ರೀಗೆ ಡ್ರಗ್ಸ್ ಪೆಡ್ಲರ್ ಗಳ ಪರಿಚಯವಿದ್ದು ಡ್ರಗ್ಸ್ ಎಲ್ಲಿ ಸಿಗಲಿದೆ ಯಾರು ಪೂರೈಸುತ್ತಾರೆ ಎನ್ನುವುದು ಆಕೆಗೆ ಗೊತ್ತಿತ್ತು. ಡ್ರಗ್ಸ್ ಅಷ್ಟು ಸುಲಭವಾಗಿ ಅನುಶ್ರೀಗೆ ಹೇಗೆ ಸಿಗುತ್ತಿತ್ತೋ ಗೊತ್ತಿಲ್ಲ.’ ಎಂದು ಚಾರ್ಜ್‌ಶೀಟ್‌ನಲ್ಲಿ ಕಿಶೋರ್? ಶೆಟ್ಟಿ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ.
೨೦೦೭-೦೮ರ ಸಮಯದಲ್ಲಿ ರಿಯಾಲಿಟಿ ಶೋ ನಡೆಯುತ್ತಿತ್ತು. ಆಗ ಅನುಶ್ರೀ, ತರುಣ್ ಹಾಗೂ ಕಿಶೋರ್ ಒಡನಾಟವಿತ್ತು ಈ ಕುರಿತಂತೆ ಕಿಶೋರ್ ಶೆಟ್ಟಿ ಹೇಳಿಕೆ ನೀಡಿರುವಂತೆ, ನಟಿ ಅನುಶ್ರೀ, ತರುಣ್ ಹಾಗೂ ಕಿಶೋರ್ ಒಟ್ಟಿಗೆ ಡ್ರಗ್ಸ್? ಸೇವಿಸುತ್ತಿದ್ದರು.
ಊಟಕ್ಕೂ ಮುನ್ನ ಡ್ರಗ್ಸ್ ಸೇವಿಸುತ್ತಿದ್ದರು ಎಂದು ಕಿಶೋರ್ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ. ಆರೋಪಿ ಕಿಶೋರ್ ಹೇಳಿಕೆಯಿಂದ ಪ್ರಕರಣ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.
ಚಾರ್ಜ್‌ಶೀಟ್‌ನಲ್ಲಿ ಹೆಸರು ಉಲ್ಲೇಖ ಮಾಡಿರುವುದು ಹಾಗೂ ಪ್ರಕರಣದ ಎರಡನೇ ಆರೋಪಿಯ ಹೇಳಿಕೆಯಿಂದ ಅನುಶ್ರೀಗೆ ಸಂಕಷ್ಟ ಎದುರಾಗಿದೆ.
ಪ್ರಕರಣದಲ್ಲಿ ಸಾಕ್ಷ್ಯಧಾರ ಕೊರತೆಯಿದ್ದರೆ ಚಾರ್ಜ್ ಶೀಟ್ ನಲ್ಲಿ ಅನುಶ್ರೀ ಹೆಸರು ಉಲ್ಲೇಖ ಆಗುತ್ತಿರಲಿಲ್ಲ. ಪೊಲೀಸರ ತನಿಖೆ ದಾಖಲೆಗಳು ಮತ್ತು ಕಿಶೋರ್ ಶೆಟ್ಟಿ ಅಮನ್ ಶೆಟ್ಟಿ ಹೇಳಿಕೆ ಮೇಲೆ ಮಂಗಳೂರು ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದಾರೆ.
ಡ್ರಗ್ಸ್ ಜಾಲ ಬೆಳಕಿಗೆ:
ಬೆಂಗಳೂರು ಸಿಸಿಬಿ ಪೊಲೀಸರು ದಾಖಲಿಸಿದ್ದ ಡ್ರಗ್ಸ್ ಕೇಸ್ ನಿಂದ ಮಂಗಳೂರು ಡ್ರಗ್ಸ್ ಜಾಲ ಬೆಳಕಿಗೆ ಬಂದಿತ್ತು. ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಸ್ಯಾಂಡಲ್‌ವುಡ್ ಡ್ರಗ್ ಕೇಸ್ ಈ ಪ್ರಕರಣದಲ್ಲಿ ಸುಮಾರು ೨೦ಕ್ಕೂ ಹೆಚ್ಚು ಜನರನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು.
ಈ ವೇಳೆ ಓರ್ವ ಆರೋಪಿ ಕೊಟ್ಟ ಸುಳಿವಿನಿಂದ ಮಂಗಳೂರು ಡ್ರಗ್ಸ್ ಜಾಲ ಬೆಳಕಿಗೆ ಬಂದಿತ್ತು. ಆರೋಪಿ ಪ್ರತೀಕ್ ಶೆಟ್ಟಿ ವಿಚಾರಣೆ ವೇಳೆ ಸಿಕ್ಕಿದ್ದ ಮಹತ್ವದ ಸುಳಿವಿನಿಂದಾಗಿ ಮಂಗಳೂರಿನ ಡ್ಯಾನ್ಸರ್ ಕಿಶೋರ್ ಶೆಟ್ಟಿ ಹಾಗೂ ತರುಣ್ ಬಗ್ಗೆ ಮಾಹಿತಿ ಸಿಕ್ಕಿತ್ತು. ಕೂಡಲೇ ಬೆಂಗಳೂರು ಸಿಸಿಬಿ ಇನ್ಸ್‌ಪಕ್ಟರ್ ರಿಂದ ಮಂಗಳೂರು ಸಿಸಿಬಿಗೆ ಮಾಹಿತಿ ರವಾನೆ ಮಾಡಿತ್ತು. ಜೊತೆಗೆ ಡ್ರಗ್ಸ್ ಜಾಲದ ಬಗ್ಗೆ ಕಣ್ಣಿಡುವಂತೆ ಮಂಗಳೂರಿನ ಪೊಲೀಸರಿಗೆ ತಿಳಿಸಿದ್ದರು.
ಅನುಶ್ರೀಗೆ ನೋಟೀಸ್:
ಡ್ಯಾನ್ಸರ್ ಕಿಶೋರ್ ಶೆಟ್ಟಿ ಜೊತೆಗಿನ ಸಂಪರ್ಕದಿಂದ ಆನುಶ್ರೀಗೆ ನೋಟಿಸ್ ನೀಡಿ , ಕಿಶೋರ್ ಶೆಟ್ಟಿ ಹೇಳಿಕೆ ಮತ್ತು ಸಿಡಿಆರ್ ಆಧರಿಸಿ ಮಂಗಳೂರು ಸಿಸಿಬಿ ಅನುಶ್ರೀ ವಿಚಾರಣೆ ನಡೆಸಲಾಗಿತ್ತು.
ಅಲ್ಲದೇ ಬೆಂಗಳೂರಿನಲ್ಲಿ ಬಂಧಿತರಾಗಿದ್ದ ಪ್ರತೀಕ್ ಶೆಟ್ಟಿ, ಡ್ಯಾನ್ಸರ್ ಕಿಶೋರ್ ಶೆಟ್ಟಿ ಮತ್ತು ತರುಣ್ ಮೂವರು ಗೆಳೆಯರಾಗಿದ್ದರು ಎಂಬ ಅಂಶ ಆಗ ಬಯಲಾಗಿತ್ತು.
ಅನುಶ್ರೀ ಹೇಳಿಕೆ:
ವಿಚಾರಣೆ ಬಳಿಕ ಅನುಶ್ರೀ ಅವರು ತರುಣ್ ಮತ್ತು ಕಿಶೋರ್ ಶೆಟ್ಟಿ ಪರಿಚಯವಿದ್ದರಿಂದ ಮಂಗಳೂರಿಗೆ ಬಂದಿದ್ದು ಅವರಿಬ್ಬರೂ ನನಗೆ ಕೋರಿಯಾಗ್ರಾಫರ್ ಆಗಿದ್ದರು.
ನನಗೆ ೧೨ ವರ್ಷಗಳ ಮುಂಚೆ ಸಂಪರ್ಕವಿದ್ದು , ಈಗ ಇಲ್ಲ. ನನ್ನ ಜೊತೆ ಡ್ಯಾನ್ಸ್ ಪಾರ್ಟರ್ ಮಾಡಿದ್ದಕ್ಕಾಗಿ ನಾನು ಬಂದಿದ್ದೇನೆ ಅಷ್ಟೇ ನಾನು ಯಾವುದೇ ಪಾರ್ಟಿಗಳನ್ನು ಕೂಡ ಮಾಡಿಲ್ಲ. ಡ್ರಗ್ಸ್ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೆ ನೀಡಿದ್ದರು.

ಸಾಫ್ಟ್ ಕಾರ್ನರ್ ಇಲ್ಲ ಸ್ಪಷ್ಟನೆ

ಡ್ರಗ್ಸ್ ಕೇಸ್ ವಿಚಾರವಾಗಿ ಯಾರ ಮೇಲೂ ಸಾಫ್ಟ್ ಕಾರ್ನರ್ ಇಲ್ಲ. ಕಾನೂನು ಪ್ರಕಾರವೇ ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಬೆಳಗಾವಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಡ್ಗರ್ಸ್ ಕೇಸ್ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿ ಕಿಶೋರ್ ಶೆಟ್ಟಿ ತಾವು ಹಾಗೂ ಆಯಂಕರ್ ಅನುಶ್ರೀ ಒಟ್ಟಾಗಿಯೇ ಸಾಕಷ್ಟು ಬಾರಿ ಡ್ರಗ್ಸ್ ಸೇವನೆ ಮಾಡಿದ್ದೇವೆ ಎಂದು ಹೇಳಿಕೆ ನೀಡಿದ್ದು, ಚಾರ್ಜ್ ಶೀಟ್ ನಲ್ಲೂ ಅನುಶ್ರೀ ಅವರ ಹೆಸರು ಉಲ್ಲೇಖಿಸಲಾಗಿದೆ. ಈ ಸಂಬಂಧ ಪ್ರತಿಕ್ರಿಯೆ ನೀಡಿದ ಸಚಿವ ಆರಗ ಜ್ಞಾನೇಂದ್ರ ಎಫ್ ಎಸ್ ಎಲ್ ವರದಿ ಬಂದಿರುವುದು ಗೊತ್ತಾಗಿದೆ. ಯಾರ ಮೇಲೂ ಸಾಫ್ಟ್ ಕಾರ್ನರ್ ಇಲ್ಲ. ಕಾನೂನು ಪ್ರಕಾರವೇ ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದರು. ಅಲ್ಲದೇ, ಪ್ರಕರಣದಲ್ಲಿ ಯಾರನ್ನೂ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು