ಡ್ರಗ್ಸ್ ಜಾಲ ದರ್ಶನ್ ಲಮಾಣಿ ತೀವ್ರ ವಿಚಾರಣೆ

ಬೆಂಗಳೂರು,ನ.೧೨-ಡ್ರಗ್ಸ್ ಜಾಲ ಪ್ರಕರಣದಲ್ಲಿ ಬಂಧಿತನಾಗಿರುವ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್‌ನ್ನು ಸಿಸಿಬಿ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಹೇಮಂತ್‌ಗೆ ಎಲ್ಲೆಲ್ಲಿ ಆಶ್ರಯ ನೀಡಲಾಗಿತ್ತು ಎಂಬ ಮಾಹಿತಿಯನ್ನು ಆರೋಪಿ ದರ್ಶನ್‌ನಿಂದ ಪಡೆಯಲಾಗುತ್ತಿದೆ.
ಚಾಮರಾಜಪೇಟೆಯ ವಿದೇಶಿ ಅಂಚೆ ಕಚೇರಿಯಲ್ಲಿ ಡ್ರಗ್ಸ್ ಪಾರ್ಸೆಲ್ ಪಡೆಯಲು ಬಂದ ಸುಜಯ್‌ನನ್ನು ಪೊಲೀಸರು ಮೊದಲು ಬಂಧಿಸಿ ತನಿಖೆ ತೀವ್ರಗೊಳಿಸಿದ ಬೆನ್ನಲ್ಲೇ ಆರೋಪಿ ಹೇಮಂತ್ ಕೊಡಗಿಗೆ ಪರಾರಿಯಾಗಿದ್ದು ಅಲ್ಲಿಂದ ಮೊದಲು ದರ್ಶನ್‌ಗೆ ಕರೆ ಮಾಡಿದ್ದಾನೆ. ಈ ವೇಳೆ ದರ್ಶನ್, ಹಾವೇರಿಗೆ ಬಾ, ನಿನಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದ್ದಾನೆ. ನಂತರ ಹೇಮಂತ್‌ಗೆ ರಾಣೆಬೆನ್ನೂರಿನ ವಸತಿ ಗೃಹದಲ್ಲಿ ಆಶ್ರಯ ನೀಡಿದ್ದಲ್ಲಿ ಈ ಎಲ್ಲಾ ಮಾಹಿತಿ ಪಡೆದು ಪೊಲೀಸರು ದರ್ಶನ್ ಲಮಾಣಿಯನ್ನು ಬಂಧಿಸಿದ್ದಾರೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ರಾಣೆಬೆನ್ನೂರಿನ ವಸತಿ ಗೃಹದಿಂದ ಹೇಮಂತ್ ಪರಾರಿಯಾಗಿದ್ದಾನೆ. ಸದ್ಯ ಆರೋಪಿ ಹೇಮಂತ್‌ಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ಮುಖ್ಯ ಪೇದೆ ಸಸ್ಪೆಂಡ್:
ಈ ನಡುವೆ ಡಾರ್ಕ್ ವೆಬ್ ಮೂಲಕ ಬರುತ್ತಿದ್ದ ಡ್ರಗ್ಸ್ ಸ್ವೀಕರಿಸುವ ಸ್ಥಳದ ಕುರಿತು ಮಾಹಿತಿ ನೀಡುತ್ತಿದ್ದ ಮುಖ್ಯ ಪೇದೆಯನ್ನು ಅಮಾನತು ಮಾಡಲಾಗಿದೆ.
ಸದಾಶಿವನಗರ ಮುಖ್ಯ ಪೇದೆ ಪ್ರಭಾಕರ್ ಪೋಸ್ಟ್ ಮೂಲಕ ಬರುತ್ತಿದ್ದ ಡ್ರಗ್ಸ್ ಅನ್ನು ಪೊಲೀಸರು, ಜನರು ಇಲ್ಲದ ಪ್ರದೇಶಗಳನ್ನ ಗುರುತಿಸಿ ಮಾಹಿತಿ ತಿಳಿಸುತ್ತಿದ್ದ. ನಂತರ ಆರೋಪಿ ಹೇಮಂತ್ ತಂಡ ಪೋಸ್ಟ್ ಮೂಲಕ ಬಂದ ಡ್ರಗ್ಸ್ ಖರೀದಿಸುತ್ತಿದ್ದರು ಎನ್ನುವ ವಿಚಾರ ತಿಳಿದುಬಂದಿದೆ.