ಡ್ರಗ್ಸ್ ಜಾಲ‌ ದರ್ಶನ್ ಸೇರಿ 9 ಆರೋಪಿಗಳ ತೀವ್ರ ವಿಚಾರಣೆ

ಬೆಂಗಳೂರು, ನ.16-ಡ್ರಗ್ಸ್ ಜಾಲ‌ ಪ್ರಕರಣದಲ್ಲಿ ಬಂಧಿಸಲಾಗಿರುವ ಮಾಜಿ ಸಚಿವ ಹಾವೇರಿಯ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಹಾಗೂ ಆತನ ಸಹಚರರನ್ನು ಸಿಸಿಬಿ ತನಿಖಾಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಕಳೆದೆರಡು ದಿನಗಳಿಂದ ಹೆಚ್ಚಿನ ವಿಚಾರಣೆ ಮಾಡಿರದ ಅಧಿಕಾರಿಗಳು ದರ್ಶನ್ ಸೇರಿದಂತೆ 9 ಆರೋಪಿಗಳನ್ನು ವಿಚಾರಣೆಗೊಳ ಪಡಿಸಿದ್ದಾರೆ.
ವಿದೇಶದಿಂದ ಅಂಚೆ ಕಚೇರಿಯೊಂದಕ್ಕೆ ಪಾರ್ಸೆಲ್ ಬಂದಿದ್ದ 500 ಗ್ರಾಂ ಹೈಡ್ರೋ ಗಾಂಜಾ ಜಪ್ತಿ ಮಾಡಿದ್ದ ಕೆಂಪೇಗೌಡ ಠಾಣೆ ಪೊಲೀಸರು, ಸುಜಯ್ ಎಂಬಾತನನ್ನು ಬಂಧಿಸಿದ್ದರು. ಆತ ನೀಡಿದ್ದ ಮಾಹಿತಿಯಂತೆ ಸ್ನೇಹಿತರಾದ ಹೇಮಂತ್ ಹಾಗೂ ಸುನೇಶ್‌ನನ್ನು ಗೋವಾದಲ್ಲಿ ಸೆರೆಹಿಡಿಯಲಾಗಿತ್ತು. ಆರೋಪಿಗಳಿಗೆ ಆಶ್ರಯ ನೀಡಿದ್ದ ಆರೋಪದಡಿ ದರ್ಶನ್ ಲಮಾಣಿ ಬಂಧಿಸಿ, ವಿಚಾರಣೆಗಾಗಿ ಕೆಂಪೇಗೌಡ ನಗರ ಠಾಣೆ ಪೊಲೀಸರು ಕಸ್ಟಡಿಗೆ ಪಡೆದಿದ್ದರು. ಇದರ ನಡುವೆಯೇ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾಯಿಸಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಆದೇಶ ಹೊರಡಿಸಿದ್ದರು.
ತನಿಖೆ ಕೈಗೆತ್ತಿಕೊಂಡಿರುವ ಸಿಸಿಬಿ, ಆರೋಪಿಗಳನ್ನು 9 ದಿನಗಳ ಕಾಲ ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದೆ. ದರ್ಶನ್ ಭಾಗಿ ಬಗ್ಗೆ ಪುರಾವೆ ಸಂಗ್ರಹಿಸುವ ಕೆಲಸ ಆರಂಭವಾಗಿದೆ. ದರ್ಶನ್ ಹಾಗೂ ಇತರ ಆರೋಪಿಗಳನ್ನು ವಿಚಾರಣೆ ನಡೆಸಿ ಹೇಳಿಕೆ ಪಡೆದ ನಂತರವೇ ಪ್ರಕರಣದ ಬಗ್ಗೆ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ.