ಡ್ರಗ್ಸ್ ಚಟಕ್ಕೆ 32 ಮೊಬೈಲ್ ಕಳವು ಆರೋಪಿ ಸೆರೆ

ಬೆಂಗಳೂರು,ಏ.೧೯-ಒಂಟಿಯಾಗಿ ಓಡಾಡುವ ಸಾರ್ವಜನಿಕರ ಮೊಬೈಲ್‌ಗಳ ಸುಲಿಗೆ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಸಂಜಯನಗರ ಪೊಲೀಸರು ೪.೫ ಲಕ್ಷ ಮೌಲ್ಯದ ೩೨ ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಜೆಸಿನಗರದ ಬೆನ್‌ಸನ್ ಟೌನ್ ನ ಧನುಷ್ ಅಲಿಯಾಸ್ ಡಿಡಿ (೧೮) ಬಂಧಿತ ಆರೋಪಿಯಾಗಿದ್ದಾನೆ.
ಬಂಧಿತನಿಂದ ೪.೫ ಲಕ್ಷ ಮೌಲ್ಯದ ಸ್ಕೂಟರ್, ಆಪಲ್ ಐ ಫೋನ್-೧, ಹಾನರ್-೧, ರಿಯಲ್ ಮಿ-೨, ಕೂಲ್ ಪ್ಯಾಡ್-೧, ಇನ್‌ಪಿನಿಕ್ಸ್-೧, ಸ್ಯಾಮ್ ಸಾಂಗ್-೫, ಲೆನೋವಾ-೧, ವಿವೋ-೭, ಷಯೋಮಿ, ಎಂಐ-೧೩ ಸೇರಿ ೩೨ ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಳೆದ ಫೆ.೧೦ರಂದು ಪ್ರಕಾಶ್ ರಾನಡೆ(೭೧)ಅವರು ಸಂಜೆ ಫೋನ್‌ನಲ್ಲಿ ಮಾತನಾಡಿಕೊಂಡು ಎ.ಇ.ಸಿ.ಎಸ್.ಲೇಔಟ್‌ನ ೭ನೇ ಮುಖ್ಯರಸ್ತೆಯಲ್ಲಿ ವಾಕಿಂಗ್ ಮಾಡುವಾಗ ಇಬ್ಬರು ದುಷ್ಕರ್ಮಿಗಳು ಹೋಂಡಾ ಡಿಯೋ ಸ್ಕೂಟರ್ ನಲ್ಲಿ ಬಂದು ತನ್ನ ಸ್ಯಾಮ್‌ಸಾಂಗ್ ಎಂ-೨೦, ಮೊಬೈಲ್ ನ್ನು ಕಸಿದು ಪರಾರಿಯಾಗಿದ್ದ ಪ್ರಕರಣ ದಾಖಲಿಸಿ ರಚಿಸಲಾಗಿದ್ದ ವಿಶೇಷ ತಂಡವು ಕಾರ್ಯಾಚರಣೆ ಕೈಗೊಂಡು ಖಚಿತ ಮಾಹಿತಿ ಆಧರಿಸಿ ಆರೋಪಿಯೊಬ್ಬನನ್ನು ಬಂಧಿಸಿ ಮತ್ತೊಬ್ಬನಿಗಾಗಿ ತೀವ್ರ ಶೋಧ ನಡೆಸಲಾಗಿದೆ.
ಆರೋಪಿ ಧನುಷ್ ಚಿಕ್ಕ ವಯಸ್ಸಿನಲ್ಲಿಯೇ ಮಾದಕ ವಸ್ತುಗಳ ವ್ಯಸನದಲ್ಲಿ ತೊಡಗಿದ್ದು, ದುಶ್ಚಟಗಳ ಖರ್ಚಿನ ಹಣಕ್ಕಾಗಿ ಮತ್ತು ಸುಲಭ ಮಾರ್ಗದಲ್ಲಿ ಹಣ ಸಂಪಾದನೆ ಮಾಡಬಹುದೆಂದು ಸಂಜಯನಗರ, ಕೊಡಿಗೆಹಳ್ಳಿ, ಸದಾಶಿವನಗರ, ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ, ಹೆಬ್ಬಾಳ, ಆರ್.ಟಿ.ನಗರ, ಕೆ.ಆರ್.ಪುರಂ, ದೊಮ್ಮಲೂರು, ಹೆಚ್.ಎ.ಎಲ್, ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆ ಸಂಜೆ ವೇಳೆಯಲ್ಲಿ ಒಂಟಿಯಾಗಿ ಮಾತನಾಡಿಕೊಂಡು ಹೋಗುವ ಸಾರ್ವಜನಿಕರ ಮೊಬೈಲ್‌ಗಳನ್ನು ಬೈಕಿನಲ್ಲಿ ಹಿಂದಿನಿಂದ ಬಂದು ಕಿತ್ತುಕೊಂಡು ಹೋಗುತ್ತಿದ್ದಾಗಿ ತನಿಖೆಯಿಂದ ತಿಳಿದು ಬಂದಿದೆ.
ಆರೋಪಿಯನ್ನು ಸಂಜಯನಗರ ಪೊಲೀಸ್ ಇನ್ಸ್‌ಪೆಕ್ಟರ್ ಕಾತ್ಯಾಯಿನಿ ಮತ್ತವರ ತಂಡ ಬಂಧಿಸಿದೆ.