ಡ್ಯಾನ್ಸ್ ಶೋನಲ್ಲಿ‌ ಸಿದ್ಧಗಂಗಾ ವಿದ್ಯಾರ್ಥಿ ಶ್ಲೋಕ್ ಪ್ರಥಮ

 ದಾವಣಗೆರೆ, ಡಿ 6; ‌ಕಳೆದ 15 ವಾರಗಳಿಂದ ಸ್ಟಾರ್ ಸುವರ್ಣ ಚಾನೆಲ್‌ನಲ್ಲಿ ಶನಿವಾರ-ಭಾನುವಾರ ರಾತ್ರಿ 8-30 ಗಂಟೆಗೆ ಮೂಡಿ ಬರುತ್ತಿದ್ದ ಡ್ಯಾನ್ಸ್-ಡ್ಯಾನ್ಸ್ ಕಾರ್ಯಕ್ರಮದಲ್ಲಿ ದಾವಣಗೆರೆ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ 5ನೇ ತರಗತಿ ಓದುತ್ತಿರುವ ಶ್ಲೋಕ್ ತನ್ನ ಅತ್ಯದ್ಭುತ ನೃತ್ಯಗಳಿಂದ ಮನೆಮಾತಾಗಿದ್ದನು. ಆಯ್ಕೆಯಾದ 12 ಜೋಡಿಗಳಲ್ಲಿ 5 ಜೋಡಿಗಳು ಗ್ರ್ಯಾಂಡ್ ಫಿನಾಲೆ ತಲುಪಿ ದಾವಣಗೆರೆಯ ಶ್ಲೋಕ್ ಖ ಮತ್ತು ದಕ್ಷಿಣ ಕನ್ನಡ ಸುಳ್ಯದ ಮೊನಿಷಾ ಜೋಡಿ ಮೋಡಿ ಮಾಡಿತ್ತು. 15 ನೃತ್ಯಗಳಲ್ಲಿ 12 ನೃತ್ಯಗಳಿಗೆ ಗೋಲ್ಡನ್ ಪರ್ಫಾಮೆನ್ಸ್ ಮೆಚ್ಚುಗೆ ದೊರಕಿತ್ತು. ತೀರ್ಪುಗಾರರಾದ ಹರ್ಷ ಮಾಸ್ಟರ್, ಹರಿಪ್ರಿಯಾ ಮತ್ತು ಪ್ರಜ್ವಲ್ ದೇವರಾಜ್‌ರವರ ಕಣ್ಮಣಿಯಾಗಿತ್ತು ಈ ಜೋಡಿ. ಪುನೀತ್ ರಾಜ್‌ಕುಮಾರ್‌ರವರು ಉದ್ಘಾಟಿಸಿದ ಈ ನೃತ್ಯಕಾರ್ಯಕ್ರಮದಲ್ಲಿ ಶ್ಲೋಕ್‌ನ ನೃತ್ಯ ನೋಡಿ ಮುಂಬರುವ ತಮ್ಮ ಚಿತ್ರದಲ್ಲಿ ಅವನಿಗೆ ಅವಕಾಶ ನೀಡುವುದಾಗಿ ಹೇಳಿದ್ದನ್ನು ಶ್ಲೋಕ್ ಅಶ್ರುಧಾರೆಯ ಮಧ್ಯೆ ಸ್ಮರಿಸಿಕೊಳ್ಳುತ್ತಿದ್ದಾನೆ. ಈತನ ನೃತ್ಯ ಮೆಚ್ಚಿ ಹಿರಿಯ ನಟಿ ಸುಧಾರಾಣಿಯವರು ಚಿನ್ನದ ಚೈನನ್ನು ಕೊರಳಿಗೆ ಹಾಕಿದ್ದರು.  ಫಿನಾಲೆಯಲ್ಲಿ ಶ್ಲೋಕ್ ಮತ್ತು ಮೊನಿಷಾ ಜೋಡಿ ಭಾರತೀಯ ನೃತ್ಯ ಪ್ರಾಕಾರಗಳಾದ ಭರತನಾಟ್ಯ, ಕೂಚುಪುಡಿ, ಕಥಕ್, ಕಥಕ್ಕಳಿ, ಬಂಜಾರ, ಮೋಹಿನಿಯಾಟ್ಟಂ, ಬೇಡರ ನೃತ್ಯ, ಕೋಲಾಟ, ಏರಿಯಲ್ ಹೀಗೆ ಪಾರಂಪರಿಕ ಮತ್ತು ಜನಪದ ನೃತ್ಯಗಳ ಅಮೋಘ ಸಮ್ಮಿಲನದಲ್ಲಿ ವಂದೇ ಮಾತರಂ ಗೀತೆಗೆ ಭಾರತದಲ್ಲಿರುವ ವೈವಿಧ್ಯತೆಯಲ್ಲಿ ಏಕತೆ ಸಾರುವ ಸಂದೇಶ ನೀಡಿದರು. ರಂಗ ಸಜ್ಜಿಕೆ, ನೃತ್ಯ ತಂಡದ ಸಮನ್ವಯತೆ, ವೇಷಭೂಷಣ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತು. ತರಬೇತಿ ನೀಡಿದ ತಾರಕ್ ಮಾಸ್ಟರ್‌ರವರ ಅಪರೂಪ ನೃತ್ಯ ಸಂಯೋಜನೆಗೆ ಪ್ರೇಕ್ಷಕರು ತಲೆದೂಗಿದರು. ಕಠಿಣ ಸ್ಪರ್ಧೆಯ ನಡುವೆ ಕುತೂಹಲ ಮೂಡಿಸಿದ ತೀರ್ಪಿನಲ್ಲಿ ಶ್ಲೋಕ್ ವಿನ್ನರ್ ಟ್ರೋಫಿ ಮತ್ತು 5 ಲಕ್ಷ ಬಹುಮಾನ ಪಡೆದಿದ್ದಾನೆ. ಶ್ಲೋಕ್ ತಾಯಿ ಪುಷ್ಪ ಮತ್ತು ಅಜ್ಜಿ ಲೀಲಾ ಬಸವರಾಜ್‌ರವರು ಬಹುಮಾನ ವಿತರಣೆ ಸಂದರ್ಭದಲ್ಲಿ ಹಾಜರಿದ್ದರು. ಶಾಲೆಗೆ ಬಂದಿರುವ ಶ್ಲೋಕ್‌ನನ್ನು ಸಂಸ್ಥೆಯ ಆಡಳಿತ ಮಂಡಳಿ, ಬೋಧಕ ವರ್ಗದವರು ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದರು.