ಡೋಲೋ ಉಡುಗೊರೆ ಪಡೆದ ವೈದ್ಯರ ವಿವರ ನೀಡಲು ಮನವಿ


ನವದೆಹಲಿ, ಆ.೬- ಡೋಲೊ ೬೫೦ ಮಾತ್ರೆ ತಯಾರಕ ಸಂಸ್ಥೆ ‘ಮೈಕ್ರೋ ಲ್ಯಾಬ್ಸ್’ ಸೇರಿದಂತೆ ಆರು ಔಷಧ ತಯಾರಕ ಕಂಪನಿಗಳಿಂದ ಉಡುಗೊರೆ ಪಡೆದ ವೈದ್ಯರ ವಿವರಗಳನ್ನು ನೀಡುವಂತೆ ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್‌ಎಂಸಿ) ಆದಾಯ ತೆರಿಗೆ ಇಲಾಖೆಗೆ ಕೋರಿದೆ.
ಸಿಬಿಡಿಟಿ ಅಧ್ಯಕ್ಷ ನಿತಿನ್ ಗುಪ್ತಾ ಅವರಿಗೆ ಎನ್‌ಎಂಸಿ ಪತ್ರ ಬರೆದಿದ್ದು ಔಷಧ ತಯಾರಕ ಸಂಸ್ಥೆಗಳಿಂದ ಉಡುಗೊರೆ ಪಡೆದಿರುವ ವೈದ್ಯರ ನೋಂದಣಿ ಸಂಖ್ಯೆ ಮತ್ತು ವಿಳಾಸದ ಸಹಿತ ಹೆಸರುಗಳನ್ನು ಒದಗಿಸಿದರೆ, ಆ ವಿವರಗಳನ್ನು ಅಗತ್ಯ ಕ್ರಮಕ್ಕಾಗಿ ಸಂಬಂಧಿಸಿದ ರಾಜ್ಯಗಳ ವೈದ್ಯಕೀಯ ಮಂಡಳಿಗಳಿಗೆ ರವಾನಿಸಲಾಗುವುದು ಎಂದು ತಿಳಿಸಲಾಗಿದೆ.
ಕಾಲಕಾಲಕ್ಕೆ ತಿದ್ದುಪಡಿಯಾಗುವ ಭಾರತೀಯ ವೈದ್ಯಕೀಯ ಮಂಡಳಿಯ (ವೃತ್ತಿಪರ ನಡವಳಿಕೆ. ಶಿಷ್ಟಾಚಾರ ಮತ್ತು ನೈತಿಕತೆ) ನಿಯಮಗಳು ೨೦೦೨ರ ಸೆಕ್ಷನ್ ೬.೮ ಬಗ್ಗೆ ಎನ್‌ಎಂಸಿಯ ಸದಸ್ಯ ಡಾ. ಯೋಗೇಂದ್ರ ಮಲಿಕ್ ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಔಷಧೀಯ ಮತ್ತು ಸಂಬಂಧಿತ ಆರೋಗ್ಯ ವಲಯದ ಉದ್ಯಮದೊಂದಿಗಿನ ವೈದ್ಯರ ಸಂಬಂಧಗಳ ಬಗ್ಗೆ ಸೆಕ್ಷನ್ ೬.೮ ವಿವರಿಸುತ್ತದೆ. ನೋಂದಾಯಿತ ವೈದ್ಯರಿಂದ ಆಗುವ ವೃತ್ತಿಪರ ದುಷ್ಕೃತ್ಯದ ಬಗ್ಗೆ ಯಾವುದೇ ದೂರನ್ನು ಸಂಬಂಧಿಸಿದ ರಾಜ್ಯ ವೈದ್ಯಕೀಯ ಮಂಡಳಿಯು ವ್ಯವಹರಿಸುತ್ತದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ನೈತಿಕತೆ ವೈದ್ಯಕೀಯ ನೋಂದಣಿ ಮಂಡಳಿ(ಇಎಂಆರ್‌ಬಿ), ರಾಷ್ಟ್ರೀಯ ವೈದ್ಯಕೀಯ ಮಂಡಳಿಯು ನೋಂದಾಯಿತ ವೈದ್ಯರ ನಡವಳಿಕೆಯಲ್ಲಿ ನೈತಿಕತೆಯನ್ನು ರೂಢಿಸಲು ಬದ್ಧವಾಗಿದೆ ಮತ್ತು ಯಾವುದೇ ದುರ್ನಡತೆಯನ್ನು ಸಹಿಸುವುದಿಲ್ಲ ಎಂದೂ ಅವರು ಹೇಳಿದ್ದಾರೆ.
ಇತ್ತೀಚೆಗೆ ಬೆಂಗಳೂರು ಮೂಲದ ಮೈಕ್ರೋ ಲ್ಯಾಬ್ಸ್ ಲಿಮಿಟೆಡ್‌ಗೆ ಸೇರಿದ ೯ ರಾಜ್ಯಗಳ ೩೬ ಸ್ಥಳಗಳ ಮೇಲೆ ಆದಾಯ ತೆರಿಗೆ ಇಲಾಖೆಯು ದಾಳಿ ನಡೆಸಿತ್ತು.
ದೇಶದಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿರುವ ಡೋಲೊ-೬೫೦ ಮಾತ್ರೆಯ ತಯಾರಕ ಸಂಸ್ಥೆಯು ತನ್ನ ಉತ್ಪನ್ನ ಮಾರಾಟಕ್ಕೆ ವಾಮಮಾರ್ಗ ಬಳಸುತ್ತಿದೆ. ವೈದ್ಯರಿಗೆ ಸುಮಾರು ‘೧,೦೦೦ ಕೋಟಿ ಮೌಲ್ಯದ ಉಡುಗೊರೆ ನೀಡಿದೆ’ ಎಂದು ನೇರ ತೆರಿಗೆಯ ಕೇಂದ್ರೀಯ ಮಂಡಳಿ (ಸಿಬಿಡಿಟಿ) ಜುಲೈನಲ್ಲಿ ಆರೋಪಿಸಿತ್ತು.