ಡೋಲಿಯಲ್ಲಿ ಗರ್ಭಿಣಿ ಹೊತ್ತೊಯ್ದ ಗ್ರಾಮಸ್ಥರು


ಸರ್ಗೂಜ(ಛತ್ತೀಸ್‌ಗಡ), ಆ. ೨- ಗರ್ಭಿಣಿಯೊಬ್ಬರನ್ನು ಒಂದು ಗ್ರಾಮದಿಂದ ಮತ್ತೊಂದು ಗ್ರಾಮದ ಕಡೆಗೆ ಸಾಗಿಸಲು ಅಡ್ಡಲಾಗಿರುವ ಮೈದುಂಬಿ ಹರಿಯುತ್ತಿರುವ ನದಿಯನ್ನು ದಾಟಿಸಲು ಡೋಲಿಯಲ್ಲಿ ಕೂರಿಸಿಕೊಂಡು ನಾಲ್ಕು ಜನರು ಹೊತ್ತೊಯ್ಯುತ್ತಿರುವ ದೃಶ್ಯವನ್ನೊಳಗೊಂಡ ವೀಡಿಯೊ ವೈರಲ್ ಆಗಿದ್ದು, ಗ್ರಾಮೀಣ ಪ್ರದೇಶದ ದುಃಸ್ಥಿತಿಗೆ ಹಿಡಿದ ಕೈಗನ್ನಡಿಯಂತಿದೆ.
ಗ್ರಾಮೀಣ ಭಾಗಕ್ಕೆ ಸೂಕ್ತ ರಸ್ತೆಗಳ ಹಾಗೂ ಆಂಬುಲೆನ್ಸ್‌ಗಳ ಸಂಪರ್ಕ ಇಲ್ಲದಿರುವುದಕ್ಕೆ ಈ ದೃಶ್ಯಾವಳಿ ಸಾಕ್ಷಿಯಾಗಿದೆ. ಸರ್ಗೂಜಾ ಜಿಲ್ಲೆಯ ಕಡ್ನಾಯಿ ಗ್ರಾಮದಿಂದ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲು ಪರದಾಡಿದಂತಹ ದೃಶ್ಯ ವೀಡಿಯೊನಲ್ಲಿದೆ.
ಗರ್ಭಿಣಿಯನ್ನು ಬುಟ್ಟಿಯಲ್ಲಿ ಕೂರಿಸಿಕೊಂಡು ನಾಲ್ವರು ಪುರುಷರು ಡೋಲಿ ಮಾದರಿಯಲ್ಲಿ ಅವರನ್ನು ಹೊತ್ತು ಸಾಗುತ್ತಿರುವ ದೃಶ್ಯ ಇದರಲ್ಲಿದೆ.
ಮೈದುಂಬಿ ಹರಿಯುತ್ತಿರುವ ನದಿಯನ್ನು ದಾಟಿಸಲು ನಾಲ್ವರು ಕಷ್ಟಪಟ್ಟ ರೀತಿ ಕಣ್ಣಿಗೆ ಕಟ್ಟುವಂತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸರ್ಗೂಜಾ ಜಿಲ್ಲಾಧಿಕಾರಿ ಸಂಜಯ್ ಕುಮಾರ್ ಉತ್ತಮ ಆರೋಗ್ಯ ಸೌಲಭ್ಯಗಳಿಲ್ಲದಿರುವ ವಿಷಯ ಇದಾಗಿಲ್ಲ. ಆದರೆ, ಕೆಲವು ದೂರದ ಗ್ರಾಮಗಳಲ್ಲಿರುವ ಜನರು ಮಳೆಗಾಲದಲ್ಲಿ ಒಂದುಕಡೆಯಿಂದ ಮತ್ತೊಂದು ಕಡೆಗೆ ಸಾಗಲು ಇಂತಹ ತೊಂದರೆಗಳನ್ನು ಅನುಭವಿಸಬೇಕಾಗಿದೆ ಎಂದು ಹೇಳಿದ್ದಾರೆ.
ಇಂತಹ ಸಣ್ಣ-ಪುಟ್ಟ ಗ್ರಾಮಗಳಲ್ಲಿನ ಜನರಿಗೆ ನೆರವಾಗಲು ಸಣ್ಣ ಪ್ರಮಾಣದ ಕಾರುಗಳ ಸೌಲಭ್ಯ ಕಲ್ಪಿಸಲು ಸ್ಥಳೀಯ ಆಡಳಿತ ಚಿಂತನೆ ನಡೆಸುತ್ತಿದೆ ಎಂದು ಅವರು ಹೇಳಿದ್ದಾರೆ.
ಪಟ್ಟಣ ಪ್ರದೇಶಗಳಿಗೆ ದೂರದಲ್ಲಿರುವ ಇಂತಹ ಗ್ರಾಮಗಳಿಗೆ ಜನರು ಹೋಗಿ ಬರಲು ಕಾರು ಸೌಲಭ್ಯವನ್ನು ಕಲ್ಪಿಸಲು ಸ್ಥಳೀಯ ಆಡಳಿತ ಯೋಜನೆ ರೂಪಿಸಿದ್ದರೂ ಕೆಲವೊಮ್ಮೆ ಅವರ ನೆರವಿಗೆ ಧಾವಿಸಲು ಸಾಧ್ಯವಾಗದಿರುವುದು ನೋವಿನ ಸಂಗತಿ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.