ಡೋರ ಸಮುದಾಯಕ್ಕೆ ಶೇ 6 ರಷ್ಟು ಮೀಸಲಾತಿ ಒದಗಿಸಬೇಕು ಇಲ್ಲದಿದ್ದರೆ ಉಗ್ರ ಹೋರಾಟ

ಆಲಮೇಲ:ಎ.6:ಒಳ ಮೀಸಲಾತಿ ವರ್ಗೀಕರಣದಲ್ಲಿ ಬಹು ಸಂಖ್ಯಾತ ಅಸ್ಪ್ರಶ್ಯ ಹಾಗೂ ಆರ್ಥಿಕವಾಗಿ ಹಿಂದುಳಿದ ಡೋಹರ ಕಕ್ಕಯ್ಯ ಸಮಾಜವನ್ನು ಅವೈಜ್ಞಾನಿಕವಾಗಿ 4ನೇ ಗುಂಪಿನಲ್ಲಿರಿಸಲಾಗಿದೆ,. ಇದು ಸಮುದಾಯಕ್ಕಾದ ದೊಡ್ಡ ಅನ್ಯಾಯ ಎಂದು ಡೋಹರ ಕಕ್ಕಯ್ಯ ಸಮಾಜದ ತಾಲೂಕಾ ಅಧ್ಯಕ್ಷ ಅಮರ ನಾರಾಯಣಕರ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದರು.

ಪಟ್ಟಣದಲ್ಲಿ ಬುಧುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಮ್ಮ ಸಮುದಾಯ ಶತಮಾನಗಳಿಂದ ಚರ್ಮಗಾರಿಕೆ ಉದ್ಯೋಗ ಮಾಡುತ್ತಾ ಅಸ್ಪ್ರಶ್ಯವಾಗಿಯೇ ಉಳಿದುಕೊಂಡಿದೆ. ಕರ್ನಾಟಕದಾದ್ಯಂತ ಸುಮಾರು 15 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು. ದಲಿತ ಎಡಗೈ ಸಮುದಾಯಗಳಾದ ಚರ್ಮ ಸಂಬಂಧಿತ ಕಸುಬು ಮಾಡುವ ಮಾದಿಗ ಹಾಗೂ ಸಮಗಾರ ಜಾತಿಗಳೊಂದಿಗೆ ನಮ್ಮ ಜಾತಿಯೂ ಇದೆ. ನಮ್ಮ ಕುಲ ಕಸುಬು ಚರ್ಮ ಹದ ಮಾಡುವುದಾಗಿರುತ್ತದೆ. ಇಲ್ಲಿವರೆಗೂ ನಮ್ಮ ಸಮಾಜ ಆದಿ ಜಾಂಬವ ಅಭಿವೃದ್ಧಿ ನಿಗಮದ ಅಡಿಯಲ್ಲಿ ಸೌಲಭ್ಯ ಪಡೆಯುತ್ತಿದ್ದರೂ ಒಳಮೀಸಲಾತಿ ವರ್ಗೀಕರಣದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವಾಗ ದಲಿತ ಎಡಗೈ ಸಮುದಾಯದ ಮಾದಿಗ ಹಾಗೂ ಸಮಗಾರ ಸಮುದಾಯಗಳನ್ನು ಮಾತ್ರ 1ನೇ ಗುಂಪಿನಲ್ಲಿ ಹೆಸರಿಸಿ 6ರಷ್ಟು ಮೀಸಲಾತಿ ನೀಡಲಾಗಿದೆ.ನಮ್ಮ ಡೋರ ಸಮುದಾಯವನ್ನು ಅಲೆಮಾರಿ ಜನಾಂಗವೆಂದು ತಪ್ಪಾಗಿ ತಿಳಿದು 4ನೇ ಗುಂಪಿನ 89 ಜಾತಿಗಳೊಂದಿಗೆ ಸೇರಿಸಿ ಕೇವಲ ಶೇ% 1 ಮೀಸಲಾತಿ ನಿಗದಿಪಡಿಸಿರುವದು ನಮ್ಮ ಸಮಾಜಕ್ಕೆ ಅನ್ಯಾಯವಾಗಿದೆ, ಕೂಡಲೇ ರಾಜ್ಯ ಸರ್ಕಾರ ಇನ್ನೊಮ್ಮೆ ನಮ್ಮ ಸಮುದಾಯದ ಸ್ಥಿತಿ ಗತಿಗಳನ್ನು ಪರಿಶೀಲಿಸಿ,ಡೋರ ಸಮುದಾಯವನ್ನು 1ನೇ ಗುಂಪಿನಲ್ಲಿರಿಸಿ ನಮ್ಮ ಸಮುದಾಯಕ್ಕೆ ಶೇ% 6 ರಷ್ಟು ಮೀಸಲಾತಿ ಒದಗಿಸಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವದು ಎಂದರು. ಈ ಸಂದರ್ಭದಲ್ಲಿ ಡೋರ ಕಕಯ್ಯಾ ಸಮಾಜದ ದಯಾನಂದ ನಾರಾಯಣಕರ,ಸುಮೀತ ನಾರಾಯಣಕರ ಹಾಗೂ ಇತರರು ಇದ್ದರು.