ಡೋಪಿಂಗ್ ಹಗರಣ ಬೋಲ್‌ಗೆ ಕ್ಲೀನ್‌ಚಿಟ್

ಸಿಡ್ನಿ, ಆ.೧- ಆಸ್ಟ್ರೇಲಿಯಾದ ಖ್ಯಾತ ಕ್ರೀಡಾಪಟುಗಳಲ್ಲಿ ಒಬ್ಬರಾಗಿರುವ, ಓಟಗಾರ ಪೀಟರ್ ಬೋಲ್ ಅವರು ಇದೀಗ ಡೋಪಿಂಗ್ ವಿವಾದದಿಂದ ಮುಕ್ತರಾಗಿದ್ದಾರೆ. ಇದೀಗ ನಡೆದ ರಕ್ತದ ಮಾದರಿ ಪರೀಕ್ಷೆಯಲ್ಲಿ ಬೋಲ್ ಅವರಿಗೆ ಸ್ಪೋರ್ಟ್ಸ್ ಇಂಟೆಗ್ರಿಟಿ ಆಸ್ಟ್ರೇಲಿಯಾ (ಎಸ್‌ಐಎ) ಕ್ಲೀನ್‌ಚಿಟ್ ನೀಡಿದೆ.
ಆರು ತಿಂಗಳ ಹಿಂದೆಯಷ್ಟೇ ನಡೆದಿದ್ದ ಡೋಪಿಂಗ್ ಪರೀಕ್ಷೆಯಲ್ಲಿ ಬೋಲ್ ಅವರು ವಿಫಲರಾಗುವ ಮೂಲಕ ಅಭಿಮಾನಿಗಳಿಗೆ ಆಘಾತ ನೀಡಿದ್ದರು. ಆದರೆ ಇದೀಗ ರಕ್ತದ ಮಾದರಿ ಪರೀಕ್ಷೆಯ ಬಳಿಕ ಅವರು ವಿವಾದದಿಂದ ಮುಕ್ತರಾಗಿದ್ದಾರೆ. ಕಳೆದ ಆವೃತ್ತಿಯ ಟೋಕಿಯೋ ಒಲಿಂಪಿಕ್ಸ್‌ನ ೮೦೦ ಮೀ. ರೇಸ್‌ನಲ್ಲಿ ಉತ್ತಮ ನಿರ್ವಹಣೆ ನೀಡುವ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ಬೋಲ್, ಕಳೆದ ಜನವರಿಯಲ್ಲಿ ನಡೆದಿದ್ದ ಸಿಂಥೆಟಿಕ್ ಇಪಿಒ ಡೋಪಿಂಗ್ ಪರೀಕ್ಷೆಯಲ್ಲಿ ವಿಫಲರಾಗಿ, ಅಭಿಮಾನಿಗಳಿಗೆ ಆಘಾತ ನೀಡಿದ್ದರು. ಅಲ್ಲದೆ ಅವರ ಕ್ರೀಡಾ ಜೀವನದ ಮೇಲೆ ಕೂಡ ಕಾರ್ಮೋಡ ಆವರಿಸಿತ್ತು. ಆದರೆ ಇದೀಗ ಸುಧೀರ್ಘ ತನಿಖೆಗಳ ಬಳಿಕ ಬೋಲ್ ಅವರ ಹೊಸ ಪರೀಕ್ಷೆಯ ಫಲಿತಾಂಶ ನೆಗೆಟಿವ್ ವರದಿ ಬಂದಿದ್ದು, ಓಟಗಾರ ನೆಮ್ಮದಿಯ ನಿಟ್ಟುಸಿರು ಬಿಟ್ಟಿದಂತಾಗಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಪೋರ್ಟ್ಸ್ ಇಂಟೆಗ್ರಿಟಿ ಆಸ್ಟ್ರೇಲಿಯಾ (ಎಸ್‌ಐಎ), ಬೋಲ್ ಅವರ ಆರಂಭಿಕ ಮಾದರಿಯ ಪರೀಕ್ಷೆಗಳಲ್ಲಿ ಹೆಚ್ಚಿನ ವಿಶ್ಲೇಷಣೆಯು ವಿಭಿನ್ನ ತಜ್ಞರ ಅಭಿಪ್ರಾಯಗಳಿಗೆ ಕಾರಣವಾಗಿತ್ತು. ಆದರೆ ಅಂತಿಮವಾಗಿ ಅದು ಋಣಾತ್ಮಕ ಎಂದು ವರದಿಯಾಗಿದೆ ಎಂದು ತಿಳಿಸಿದೆ.