ಡೋಣಮರಡಿ ಗ್ರಾಮದಲ್ಲಿ ರೋಜಗಾರ ದಿವಸ್ ಆಚರಣೆ

ರಾಯಚೂರು,ಜ.೧೪-ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕೆಲಸಕ್ಕಾಗಿ ಗುಳೆ ಹೋಗುವುದನ್ನು ತಡೆಯುವ ನಿಟ್ಟಿನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಲಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಿರವಾರ ತಾಲೂಕು ಪಂಚಾಯತಿ ಸಂಯೋಜಕರಾದ ರಾಜೇಂದ್ರ ಕುಮಾರ್ ಅವರು ತಿಳಿಸಿದರು.
ಅವರು ಜ.೧೩ರ ಗುರುವಾರ ದಂದು ಜಿಲ್ಲೆಯ ಸಿರವಾರ ತಾಲೂಕಿನ ಹೀರಾ ಗ್ರಾಮ ಪಂಚಾಯತಿಯ ಡೋಣಮರಡಿ ಗ್ರಾಮದ ಶಿವಣ್ಣ ಅವರ ಹೊಲದಲ್ಲಿ ಬದು ನಿರ್ಮಾಣದಲ್ಲಿ ತೂಡಗಿಸಿ ಕಾರ್ಮಿಕರಿಗೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ರೋಜಗಾರ್ ದಿವಸ್ ಆಚರಿಸಿ ಮಾತನಾಡಿ, ಗ್ರಾಮದ ಕೂಲಿ ಕಾರ್ಮಿಕರು ನರೇಗಾ ಯೋಜನೆಯಡಿ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಬೇಕೆಂದು ಹೇಳಿದರು.
ವೈಯಕ್ತಿಕ ಕಾಮಗಾರಿಗಳಾದ ದನದ ಶೆಡ್, ಮೀನು ಸಾಕಾಣಿಕೆ, ಕೃಷಿ ಹೊಂಡ ನಿರ್ಮಾಣ, ಬದು ನಿರ್ಮಾಣ, ಕುರಿ, ಮೇಕೆ ಶೆಡ್, ಬಚ್ಚಲು ಇಂಗು ಗುಂಡಿ ಸೌಕರ್ಯ ಪಡೆದುಕೊಳ್ಳಬೇಕೆಂದರು. ನರೇಗಾ ಯೋಜನೆ ಅಡಿಯಲ್ಲಿ ಕೆಲಸ ಮಾಡಿ ಪ್ರತಿದಿನ ೨೮೯ರೂ. ಕೂಲಿ ಪಡೆದು ತಮ್ಮ ತಮ್ಮ ಗ್ರಾಮಗಳಲ್ಲಿ ನೆಮ್ಮದಿಯ ಜೀವನ ನಡೆಸುವಂತೆ ತಿಳಿಸಿದರು.
ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಸಹಾಯವಾಗಲೆಂದು ಸರಕಾರ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತಂದಿದೆ. ಉದ್ಯೋಗ ಬಯಸುವವರು ಆಯಾ ಗ್ರಾಮ ಪಂಚಾಯತಿ ಕಚೇರಿಗೆ ಅಗತ್ಯ ದಾಖಲೆಗಳಾದ ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ, ಭಾವಚಿತ್ರವುಳ್ಳ ವಿವರಗಳನ್ನು ಸಲ್ಲಿಸಿದ್ದಲ್ಲಿ ಜಾಬ್ ಕಾರ್ಡ್ ಪಡೆದುಕೊಂಡು ಕೆಲಸ ನಿರ್ವಹಿಸುವದಕ್ಕೆ ಸಹಕಾರಿಯಾಗಲಿದೆಂದರು. ಈ ಸಂದರ್ಭದಲ್ಲಿ ಕಾಯಕಮಿತ್ರರು, ಕೂಲಿ ಕಾರ್ಮಿಕರು ಇದ್ದರು.