ಡೇವಿಡ್ ಸಿಮೆಯೋನ್‍ಗೆ ಎಮ್.ಎಲ್.ಸಿ ಮಾಡಿ: ಭಾಸ್ಕರ ಬಾಬು ಪಾತರಪಳ್ಳಿ

ಬೀದರ್: ಮೇ.25:ಮಾಜಿ ವಿಧಾನ ಪರಿಷತ್ ಸಭಾಪತಿಗಳು ಹಾಗೂ ಕಲ್ಯಾಣ ಕರ್ನಾಟಕದ ಕ್ರೈಸ್ತ ಸಮಾಜದ ಬಹು ದೊಡ್ಡ ಆಸ್ತಿ ಎನಿಸಿರುವ ಡೇವಿಡ್ ಸಿಮೆಯೋನ್ ಅವರಿಗೆ ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡುವಂತೆ ಕರ್ನಾಟಕ ಕ್ರೈಸ್ತರ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷರಾದ ಭಾಸ್ಕರ ಬಾಬು ಪಾತರಪಳ್ಳಿ ಆಗ್ರಹಿಸಿದರು.
ಶನಿವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಕಲ್ಯಾಣ ಕರ್ನಾಟಕದ 07 ಜಿಲ್ಲೆಗಳಾದ ಕಲಬುರಗಿ, ಯಾದಗೀರಿ, ಬೀದರ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಕ್ರೈಸ್ತ ಸಮಾಜದವರ ಜನಸಂಖ್ಯೆ 6-7 ಲಕ್ಷ ಇದ್ದಾರೆ. ದೇಶ ಸ್ವಾತಂತ್ರದ ನಂತರ ಎಲ್ಲಾ ಕ್ರೈಸ್ತ ಸಮಾಜದವರು ಕಾಂಗ್ರೇಸ್ ಪಕ್ಷಕ್ಕೆ ಬೆಂಬಲಿಸುತ್ತಾ ಬಂದಿರುತ್ತಾರೆ. ಲೋಕಸಭಾ ಚುನಾವಣೆ/ವಿಧಾನಸಭಾ ಚುನಾವಣೆ ಅಥವಾ ಸ್ಥಳೀಯ ಚುನಾವಣೆಯಲ್ಲಿ ಕ್ರೈಸ್ತರು ಸಂಪೂರ್ಣವಾಗಿ ಕಾಂಗ್ರೇಸ್ ಪಕ್ಷಕ್ಕೆ ಎಲ್ಲಾ ರೀತಿಯಿಂದ ಸಹಕಾರ ನೀಡುತ್ತ ಬಂದಿರುತ್ತಾರೆ. ಆದಾಗ್ಯೂ ಕಾಂಗ್ರೇಸ್ ಪಕ್ಷವು ಕ್ರೈಸ್ತ ಸಮುದಾಯದ ಮತಗಳನ್ನು ಪಡೆದು ಸಮುದಾಯವನ್ನು ಯಥಾವತ್ತಾಗಿ ಅಲಕ್ಷಿಸುತ್ತಾ ಬಂದಿದೆ. ಪಕ್ಷದಲ್ಲಿ ಸರಕಾರದಲ್ಲಾಗಲೀ ಸ್ಥಾನಮಾನಗಳನ್ನು ಕಲ್ಪಿಸದೇ ಇರುವುದು ಕ್ರೈಸ್ತ ಸಮುದಾಯಕ್ಕೆ ಮಾಡಿರುವ ಘೋರ ಅನ್ಯಾಯ ಆಗುತ್ತಿದೆ. ಜಿಲ್ಲಾ ಪಂಚಾಯತ ಮತ್ತು ತಾಲೂಕಾ ಪಂಚಾಯತಗಳಲ್ಲಿ ಟಿಕೇಟ್ ನೀಡದೇ ಕ್ರೈಸ್ತರಿಗೆ ಕಾಂಗ್ರೇಸ್ ಪಕ್ಷವು ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆರೋಪಿಸಿದರು.
1978 ರಲ್ಲಿ ದಿವಂಗತ ಆರ್.ಎಸ್. ಮನೋಹರ ಅವರಿಗೆ ವಿಧಾನ ಪರಿಷತ್ತಿಗೆ ಕಾಂಗ್ರೇಸ್ ನಾಮಕರಣ ಮಾಡಿದ್ದನ್ನು ಬಿಟ್ಟರೆ ಇಂದಿನ ವರೆಗೂ ಅಂದರೆ ಸುಮಾರು 46 ವರ್ಷಗಳಿಂದ ಕಲ್ಯಾಣ ಕರ್ನಾಟಕದ ಕ್ರೈಸ್ತರಿಗೆ ಅನ್ಯಾಯವಾಗಿದೆ ಜೂನ್-2024 ರಲ್ಲಿ ಜರುಗುವ ವಿಧಾನ ಪರಿಷತ್ ಚುನಾವಣೆಗೆ ಕಲ್ಯಾಣ ಕರ್ನಾಟಕ ಭಾಗದ ಹಿರಿಯ ರಾಜಕಾರಣಿ ಡೇವಿಡ್ ಸಿಮೆಯೋನ್ ಅವರಿಗೆ ಎಮ್.ಎಲ್.ಸಿ ಸ್ಥಾನ ಕಲ್ಪಿಸಿಕೊಡುವಂತೆ ಒತ್ತಾಯಿಸಿದರು.
ರಾಜ್ಯದಲ್ಲಿ ಇಂಧನ ಸಚಿವ ಕೆ.ಜೆ. ಜಾರ್ಜ ಅವರ ಹಿರಿತನ ಡೇವಿಡ್ ಸಿಮೆಯೋನ್ ಹಿರಿಯರಾಗಿದ್ದಾರೆ. ತಮ್ಮ ಇಡೀ ಜೀವನ 47 ವರ್ಷ ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದು ಸಾಮಾಜಿಕ ಕಾರ್ಯಕರ್ತರಾಗಿ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಶ್ರಮಿಸಿರುತ್ತಾರೆ. ಆದ್ದರಿಂದ ಕರ್ನಾಟಕ ವಿಧಾನ ಸಭೆಯಿಂದ ವಿಧಾನ ಪರಿಷತ್ತಿಗೆ ಜರುಗುವ ಚುನಾವಣೆಯಲ್ಲಿ 1 ಸ್ಥಾನವನ್ನು ಕ್ರೈಸ್ತ ಸಮುದಾಯಕ್ಕೆ ನೀಡಬೇಕೆಂದು ಭಾಸ್ಕರ್ ಬಾಬು ಆಗ್ರಹಿಸಿದರು.
ಜಿಲ್ಲಾ ಸಂಘ-ಸಂಸ್ಥೆಗಳ ವೇದಿಕೆ ಅಧ್ಯಕ್ಷ ಡಾ. ಎಂ.ಎಸ್. ಶಿರೋಮಣಿ, ಕರ್ನಾಟಕ ಕ್ರೈಸ್ತರ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ರಾಜೇಶ ಜ್ಯೋತಿ, ಸಮಾಜದ ಮನುಖಂಡರಾದ ಮಾಣಿಕ ಕೌಠಾ, ಸುಕೀರ್ತಾ ವಗ್ಗೆ, ಸಂತೋಷಾ ಸುಂದರ್ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.