ಡೇರಾ ಕಮಿಟಿ ರಚನೆಗೆ ಹೋರಾಟ:ಬೆದರಿಕೆ- ರಾಜೇಶ್ ಆರೋಪ


ರಾಯಚೂರು.ನ.3- ಡೇರಾ ಕಮಿಟಿ ರಚನೆ ಕುರಿತಂತೆ ಹೋರಾಟ ಮಾಡುತ್ತಿರುವ ನಮಗೆ ಖಾಸಗಿ ಶಾಲೆಯ ಮುಖ್ಯಸ್ಥರಾಗಿರುವ ನಾಗರೆಡ್ಡಿ ಅವರು ಏರುಧ್ವನಿಯಲ್ಲಿ ಮಾತನಾಡಿ ವೈಯಕ್ತಿಕ ವಿಚಾರಗಳನ್ನು ಪ್ರಸ್ತಾಪಿಸಿ ಬೆದರಿಸುವ ಕೆಲಸ ಮಾಡುತ್ತಿದ್ದಾರೆಂದು ಕ್ರಾಂತಿಯೋಗಿ ಶ್ರೀ ಬಸವೇಶ್ವರ ಸೇವಾ ಸಂಘದ ಸಂಸ್ಥಾಪಕ ಕೆ.ರಾಜೇಶಕುಮಾರ ಆತಂಕ ವ್ಯಕ್ತಪಡಿಸಿದ್ದಾರೆ.
ಆವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತ, ಶಿಕ್ಷಣ ಕ್ರಾಂತಿ ಎಂಬ ಪತ್ರಿಕೆಯನ್ನು ಮಾಸಿಕವಾಗಿ ಹೊರಡಿಸುತ್ತಿರುವ ನಾಗಿರೆಡ್ಡಿ ಎಂಬುವವರು ಕರೆ ಮಾಡಿ ಡೇರಾ ಕಮಿಟಿ ರಚನೆಯ ಹೋರಾಟದಿಂದ ನೂರು ಶಾಲೆಗಳಿಗೆ ತೊಂದರೆವುಂಟಾಗಿದೆ. ನೀ ಮಾಡುವ ಕೆಲಸದಿಂದ ಅಧಿಕಾರಿಗಳು ಖಾಸಗಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ ಎಂದಿರುವ ಅವರು, ಕೋವಿಡ್-19ನಲ್ಲಿ ಜನರು ಉಪವಾಸ ಮಲಗಿದ್ದಾರೆಯೇ ಎಂದು ಪ್ರಶ್ನಿಸಿರುವುದು ಎಷ್ಟು ಸರಿ ಎಂದರು.
ಕೋವಿಡ್-19 ಲಾಕ್‍ಡೌನ ಸಂದರ್ಭದಲ್ಲಿ ಜನರು ತೀವ್ರ ತೊಂದರೆಗೊಳಗಾಗಿದ್ದಾರೆ. ನಂತರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಜನರ ಹತ್ತಿರ ಹಣವಿಲ್ಲದ ಸಂದರ್ಭದಲ್ಲಿ ಪೂರ್ಣ ಶುಲ್ಕ ಪಾವತಿಸಿ ಎಂದು ಹೇಳುವುದು ಎಷ್ಟು ಸರಿ. ಖಾಸಗಿ ಶಾಲೆಗಳ ಶಿಕ್ಷಕರಿಗೆ ಅರ್ಧ ಸಂಬಳ ನೀಡಿ ಶಾಲೆಗಳನ್ನು ನಡೆಸುತ್ತಿರುವಾಗ ಪೋಷಕರಿಂದ ಪೂರ್ಣ ಶುಲ್ಕ ಪಾವತಿ ಮಾಡಿ ಎಂದು ಹೇಳುವುದು ಸರಿಯಲ್ಲ ಎಂದು ಪ್ರಶ್ನಿಸಲಾಗಿದೆ. ಆದರೆ, ಅವರು ಜನರು ಎಲ್ಲಿ ಉಪವಾಸ ಇದ್ದಾರೆ ಎಂದು ಹೇಳಿದ್ದಲ್ಲದೇ ನಿನ್ನಿಂದ ನೂರು ಶಾಲೆಗಳ ಆಡಳಿತ ಮಂಡಳಿಗಳಿಗೆ ತೊಂದರೆಯಾಗಿದೆ ಮತ್ತು ಇದರ ಮುಂದುವರೆದ ಭಾಗವಾಗಿ ನಿನಗೆ ಎಷ್ಟು ಮಕ್ಕಳಿದ್ದಾರೆ ಎಂದು ಪ್ರಶ್ನಿಸುವುದು ಆತಂಕವನ್ನುಂಟುಮಾಡಿದೆ ಎಂದು ಹೇಳಿದರು.
550 ಶಾಲೆಗಳ ವಿದ್ಯಾರ್ಥಿಗಳ ಪೋಷಕರ ಪರವಾಗಿ ಸರ್ಕಾರದ ನಿಯಮಾವಳಿ ಪ್ರಕಾರ ಹೋರಾಡುತ್ತಿದ್ದೇನೆ. ಡೇರಾ ಕಮಿಟಿ ರಚನೆಯ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುವುದು ಬಹಿರಂಗ ಚರ್ಚೆಗೆ ಬರಬೇಕು. ಸರ್ಕಾರದ ನಿಯಮಾವಳಿಗಳ ಪ್ರಕಾರ ಶಾಲೆಗಳನ್ನು ನಡೆಸಲು ನಿಮಗೇಕೆ ತೊಂದರೆ. ಒಂದುವೇಳೆ ಶಾಲೆಗಳನ್ನು ನಡೆಸದಾಗದಿದ್ದರೆ ಸರ್ಕಾರಕ್ಕೆ ನೀಡಿ ಎಂದು ನಾಗರೆಡ್ಡಿಯವರಿಗೆ ಸವಾಲು ಹಾಕಿದರು.
ಈ ಸಂದರ್ಭದಲ್ಲಿ ರಾಮಲಿಂಗ, ಶಂಕರ, ಇಮ್ರಾನಖಾನ್, ಚಂದ್ರು ಯಕ್ಲಾಸಪೂರ, ಅಫ್ತಾಬ್, ಜಿಯಾವುದ್ದೀನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.