ಡೆತ್‌ನೋಟ್ ಬರೆದಿಟ್ಟು ಒಂದೇ ಕುಟುಂಬದ ಐವರು ಆತ್ಮಹತ್ಯೆ

ತುಮಕೂರು, ನ. 26- ಸಾಲಬಾಧೆ ತಾಳಲಾರದೇ ಹಾಗೂ ಅಕ್ಕಪಕ್ಕದ ಮನೆಯವರ ಕಿರುಕುಳದಿಂದ ಬೇಸತ್ತು ಪತಿ, ಪತ್ನಿ ಹಾಗೂ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಇಲ್ಲಿನ ಸದಾಶಿವನಗರದಲ್ಲಿ ನಡೆದಿದೆ.
ಸದಾಶಿವನಗರದಲ್ಲಿ ವಾಸವಾಗಿದ್ದ ಗನೀಬ್ ಸಾಬ್ (32), ಸುಮಯಾ (30) ಹಾಗೂ ಮಕ್ಕಳಾದ ಹಜೀರಾ, ಮಹಮದ್ ಶುಭಾನ್ ಹಾಗೂ ಮಹಮದ್ ಮುನೀರ್ ಎಂಬುವರೇ ಆತ್ಮಹತ್ಯೆಗೆ ಶರಣಾಗಿರುವ ದುರ್ದೈವಿಗಳು.


ಮೂಲತಃ ಸಿರಾ ತಾಲ್ಲೂಕಿನ ಚಿಕ್ಕನಹಳ್ಳಿಯ ನಿವಾಸಿಗಳಿರುವ ಗನೀಬ್ ಸಾಬ್ ತುಮಕೂರಿನ ಸದಾಶಿವನಗರದಲ್ಲಿ ಕಬಾಬ್ ಅಂಗಡಿ ನಡೆಸುತ್ತಿದ್ದರು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತುಮಕೂರಿಗೆ ಬಂದು ನೆಲೆಸಿದ್ದರು ಎನ್ನಲಾಗಿದೆ.
ಕೆಳಗಡೆ ಬಾಡಿಗೆಗೆ ಇದ್ದ ವ್ಯಕ್ತಿಯೊಬ್ಬರು ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಅವರೇ ನಮ್ಮ ಸಾವಿಗೆ ಕಾರಣ ಎಂದು ಸಹ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದರೊಂದಿಗೆ ಡೆತ್ ನೋಟ್‌ ಸಹ ಬರೆದಿಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಮ್ಮ ಆತ್ಮಹತ್ಯೆಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ನೀಡಬೇಕು. ನಾವು ಯಾರ ಸಹವಾಸಕ್ಕೂ ಹೋಗುತ್ತಿರಲಿಲ್ಲ. ಅಕ್ಕಪಕ್ಕದ ಮನೆಯವರು ದೌರ್ಜನ್ಯ ನೀಡುತ್ತಿದ್ದರು ಎಂದು ಸಹ ವಿಡಿಯೋದಲ್ಲಿ ಹೇಳಿದ್ದಾರೆ.
ಘಟನೆಯ ಸುದ್ದಿ ತಿಳಿದ ಕೂಡಲೇ ತಿಲಕ್‌ಪಾರ್ಕ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ಭೇಟಿ ನೀಡಿ ಪರಿಶೀಲಿಸಿದರು.