ಡೆಂಘೀ ನಿರ್ಮೂಲನೆಗೆ ಪರಿಸರ ಸ್ವಚ್ಚತೆ ಕಾಯ್ದುಕೊಳ್ಳಿ: ಗುಂಡಬಾವಡಿ

ವಿಜಯಪುರ, ಮೇ.18:ಮುಂಜಾಗ್ರತಾ ಕ್ರಮವಾಗಿ ಮನೆಯ ಸುತ್ತಮುತ್ತಲೂ ನೀರು ನಿಲ್ಲದಂತೆ ನೋಡಿಕೊಂಡು ಡೆಂಘೀ ನಿರ್ಮೂಲನೆಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಕೆ.ಡಿ. ಗುಂಡಬಾವಡಿ ಹೇಳಿದರು.
ಶುಕ್ರವಾರ ನಗರ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಅಂಗವಾಗಿ ” ಸಮುದಾಯದೊಂದಿಗೆ ಸೇರಿ ಡೆಂಘೀ ಜ್ವರವನ್ನು ನಿಯಂತ್ರಿಸೋಣ” ಎಂಬ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮನೆಯ ಸುತ್ತಮುತ್ತಲೂ ಸ್ವಚ್ಚತೆಯನ್ನು ಕಾಪಾಡುವುದರಿಂದ ರೋಗಗಳಿಂದ ದೂರ ಇರಬಹುದು. ವೈಯಕ್ತಿಕ ಸ್ವಚ್ಚತೆಯೊಂದಿಗೆ ಪರಿಸರದ ಸ್ವಚ್ಚತೆಗೂ ಆದ್ಯತೆ ನೀಡಿ ರೋಗ ಮುಕ್ತ ಸಮಾಜ ನಿರ್ಮಾಣ ಮಾಡಲು ಸಾರ್ವಜನಿಕರು ಪಣ ತೋಡಬೇಕು ಎಂದು ಕರೆ ನೀಡಿದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ. ಜೈಬುನ್ನಿಸಾಬೇಗಂ ಬೀಳಗಿ ಮಾತನಾಡಿ, ಡೆಂಘೀ ರೋಗವು ಈಡಿಸ್ ಈಜಿಪ್ತ ಹೆಣ್ಣು ಸೊಳ್ಳೆಯಿಂದ ಹರಡುತ್ತಿದ್ದು, ನಿಂತ ನೀರಿನಲ್ಲಿ ಈ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಹಾಗಾಗಿ ಮನೆಯ ಸುತ್ತಮುತ್ತಲು ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಜಾಥಾ ಕಾರ್ಯಕ್ರಮವು ನಗರದ ಸ್ಯಾಟಲೈಟ್ ಬಸ್‍ನಿಲ್ದಾಣದಿಂದÀ ಆರಂಭಗೊಂಡು, ಗೋದಾವರಿ ವೃತ್ತ, ಶಾಸ್ತ್ರಿ ನಗರದ ಮುಖಾಂತರ ಮನೆ-ಮನೆಗೆ ತೆರಳಿ ಡೆಂಘೀ ರೋಗ ಲಕ್ಷಣದ ಬಗ್ಗೆ ಕರಪತ್ರಗಳನ್ನು ಹಂಚಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಜೇಶ್ವರಿ ಗೋಲಗೇರಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಕವಿತಾ, ಡಿಟಿಒ ಅಧಿಕಾರಿ ಡಾ. ಅಪ್ಪಾಸಾಹೇಬ ಇನಾಂದಾರ, ತಾಲೂಕಾ ಆರೋಗ್ಯ ಅಧಿಕಾರಿ ಡಾ. ಪಿ.ಎಂ. ಹಿಟ್ನಳ್ಳಿ ಹಾಗೂ ಇಲಾಖೆಯ ಅಧಿಕಾರಿಗಳು ಹಾಗೂ ಕಚೇರಿಯ ಸಿಬ್ಬಂದಿ ಜಾಥಾ ಕಾರ್ಯಕ್ರಮದಲ್ಲಿ ಹಾಜರಿದ್ದರು.