ಡೆಂಘಿ ಪ್ರಕರಣಗಳ ಹೆಚ್ಚಳ ಹಿನ್ನೆಲೆ ಕಲಬುರಗಿ ಮಹಾನಗರ ಪಾಲಿಕೆ ವತಿಯಿಂದ ಮಾಸ್ ಫಾಗಿಂಗ್

ಕಲಬುರಗಿ, ಸೆ. 26:ಕಲಬುರಗಿ ನಗರದಲ್ಲಿ ಡೆಂಘಿ ಮುಂತಾದ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೊಳ್ಳೆಗಳ ನಿರ್ಮೂಲನೆಗಾಗಿ ಕಲಬುರಗಿ ಮಹಾನಗರ ಪಾಲಿಕೆ ವತಿಯಿಂದ ಮಾಸ್ (ಬೃಹತ್) ಫಾಗಿಂಗ್ ಕಾರ್ಯ ಕೈಗೊಳ್ಳಲಾಗಿದೆ.
ನಿತ್ಯ ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ ನಗರದಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚಾಗಿದ್ದು, ಇದರಿಂದ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಹೀಗಾಗಿ ಬೃಹತ್ ಫಾಗಿಂಗ್ ಕೈಗೊಳ್ಳಲಾಗಿದೆ ಎಂದು ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
15 ಹ್ಯಾಂಡ್ ಫಾಗಿಂಗ್, 3 ಮೌಂಟೆಡ್ ಮಿಷನ್ ಗಳ ಮೂಲಕ ಫಾಗಿಂಗ್ ಕಾರ್ಯಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಒಟ್ಡು 19 ಹ್ಯಾಂಡ್ ಫಾಗಿಂಗ್ ಇದ್ದು, ಈಗ 15 ಬಳಸಿಕೊಳ್ಳಲಾಗುತ್ತಿದೆ. ಉಳಿದ 4 ದುರಸ್ತಿಯಲ್ಲಿದ್ದು, ರಿಪೇರಿಯಾದ ನಂತರ ಅವುಗಳನ್ನೂ ಬಳಸಿಕೊಳ್ಳಲಾಗುವುದು ಎಂದು ತಿಳಿಸಿರುವ ಅವರು,ಪ್ರತಿ ವಲಯದಲ್ಲಿ ಎರಡು ದಿನಗಳ ಕಾಲ ಬೃಹತ್ತಾಗಿ ಫಾಗಿಂಗ್ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸಾರ್ವಜನಿಕರು ತಮ್ಮ ಮನೆಗಳ ಅಸುಪಾಸಿನಲ್ಲಿ ಎಲ್ಲೂ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಸೊಳ್ಳೆಗಳು ಕಚ್ಚದಂತೆ ಪರದೆಗಳನ್ನು ಬಳಕೆ ಮಾಡಬೇಕು ಎಂದು ಅವರು ಕೋರಿದ್ದಾರೆ.