ಡೆಂಗ್ಯೂ ವಿರೋಧಿ ಮಾಸಾಚರಣೆ

ಹುಳಿಯಾರು, ಜು. ೮- ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಇಲ್ಲಿನ ಮಾರುತಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಡೆಂಗ್ಯೂ ವಿರೋಧಿ ಮಾಸಾಚರಣೆ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಆರೋಗ್ಯ ನಿರೀಕ್ಷಣಾಧಿಕಾರಿ ರೇಣುಕರಾಜ್, ಯಾವ ರೀತಿ ಡೆಂಗ್ಯೂ ಜ್ವರ ಸಮುದಾಯದಲ್ಲಿ ಹರಡುತ್ತದೆ. ಇದರಿಂದ ಜನರ ಮೇಲೆ ಯಾವ ರೀತಿ ಪರಿಣಾಮಗಳು ಆಗುತ್ತವೆ ಎಂಬುದರ ಅರಿವು ಮೂಡಿಸುವುದು ನಮ್ಮ ಮುಖ್ಯ ಗುರಿಯಾಗಿದೆ. ಇದರಿಂದ ಸಮುದಾಯದಲ್ಲಿ ಉಂಟಾಗುವ ಸಾವು-ನೋವುಗಳನ್ನು ನಿಯಂತ್ರಿಸಬಹುದು. ಇದಕ್ಕೆ ಸಮುದಾಯದ ಸಹಭಾಗಿತ್ವ ಅಗತ್ಯ ಎಂದರು.
ಡೆಂಗ್ಯೂ ಜ್ವರವು ವೈರಸ್‌ನಿಂದ ಬರುತ್ತದೆ. ಹಗಲು ಹೊತ್ತಿನಲ್ಲಿ ಕಚ್ಚುವ ಈಡಿಸ್ ಸೊಳ್ಳೆಗಳಿಂದ ಈ ಜ್ವರ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ವಿಪರೀತ ಜ್ವರ, ಮೈಮೇಲೆ ಕೆಂಪು ಗಂದೆಗಳು, ಕಣ್ಣಿನ ಹಿಂಭಾಗ ನೋವು, ತಲೆ ನೋವು, ಮಾಂಸಖಂಡಗಳ ನೋವು, ಈ ರೋಗದ ಪ್ರಮುಖ ಲಕ್ಷಣಗಳು. ರೋಗ ತೀವ್ರ ಸ್ಥಿತಿ ತಲುಪಿದಾಗ ಬಾಯಿ, ಮೂಗು ಮತ್ತು ಒಸಡುಗಳಿಂದ ರಕ್ತಸ್ರಾವ ಹಾಗೂ ಚರ್ಮದ ಅಲಲ್ಲಿ ರಕ್ತಸ್ರಾವದ ಗುರುತು ಕಾಣಿಸಿಕೊಳ್ಳುತ್ತವೆ. ಇಂತಹ ಲಕ್ಷಣಗಳು ಕಂಡು ಬಂದ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಪ್ರಸನ್ನಕುಮಾರ್, ಸಮುದಾಯ ಆರೋಗ್ಯಾಧಿಕಾರಿಗಳಾದ ವಸಂತ, ಪಿಎಚ್‌ಸಿಒ ವೀಣಾ, ಆಶಾ ಕಾರ್ಯಕರ್ತೆ ಅಬಿದಾನಿ ಮತ್ತಿತರರು ಉಪಸ್ಥಿತರಿದ್ದರು.