‘ಡೆಂಗ್ಯೂ’ ರಕ್ಷಣೆಗಾಗಿ ಸೊಳ್ಳೆ ಪರದೆ ವಿತರಣೆ

ಪುತ್ತೂರು, ಜೂ.೯- ನಗರಸಭಾ ವ್ಯಾಪ್ತಿಯಲ್ಲಿ ಡೆಂಗ್ಯೂ ಜ್ವರದ ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಎಲ್ಲಾ ವಾರ್ಡ್‌ಗಳಲ್ಲೂ ಆರೋಗ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಲಾಗಿದ್ದು, ನಗರಸಭೆಯ ಎಲ್ಲಾ ೩೧ ವಾರ್ಡ್‌ಗಳಲ್ಲೂ ಡೆಂಗ್ಯೂ ಪ್ರಕರಣಗಳಿರುವ ಪ್ರದೇಶಗಳಲ್ಲಿ ಪ್ರತಿ ವಾರ್ಡ್‌ಗೆ ತಲಾ ೩೦ರಂತೆ ಸೊಳ್ಳೆ ಪರದೆಗಳನ್ನು ವಿತರಣೆ ಮಾಡಲಾಗುವುದು ಎಂದು ನಗರ
ಸಭಾ ಅಧ್ಯಕ್ಷ ಕೆ. ಜೀವಂಧರ್ ಜೈನ್ ತಿಳಿಸಿದ್ದಾರೆ.
ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸೊಳ್ಳೆ ಪರದೆಗಳ ವಿತರಣೆಗೆ ಶಾಸಕರ ನೇತೃತ್ವದಲ್ಲಿ ಚಾಲನೆ ನೀಡಲಾಗುವುದು. ಡೆಂಗ್ಯೂ ಪ್ರಕರಣಗಳು ವರದಿಯಾದ ವಾರ್ಡ್‌ಗಳಲ್ಲಿ ಔಷಧಿ ಸಿಂಪಡಣೆಯ ಕುರಿತಾಗಿ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಡೆಂಗ್ಯೂ ಹರಡುವ ಸೊಳ್ಳೆ ಮತ್ತು ಮರಿಗಳ ನಾಶಕ್ಕಾಗಿ ಫಾಗಿಂಗ್ ಮತ್ತು ಔಷಧಿ ಸಿಂಪಡಣೆ ಕಾರ್ಯಕ್ರಮವನ್ನು ನಗರಸಭೆ ಹಮ್ಮಿಕೊಂಡಿದೆ ಎಂದರು.
ಕೊರೊನಾ ನಿಯಂತ್ರಣ
ನಗರಸಭಾ ವ್ಯಾಪ್ತಿಯಲ್ಲಿ ಕೊರೊನಾ ಪ್ರಕರಣಗಳು ಕಳೆದ ಒಂದು ವಾರದಿಂದ ಇಳಿಮುಖ ಆಗುತ್ತಿದೆ. ಕೊರೋನಾ ನಿಯಂತ್ರಣದ ಬಗ್ಗೆ ನಗರಸಭೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು
ಕೈಗೊಂಡಿದೆ. ನಗರದ ಸಾರ್ವಜನಿಕ ಆಸ್ಪತ್ರೆ, ನೆಲ್ಲಿಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಪುರಭವನದಲ್ಲಿ ಲಸಿಕಾ ವಿತರಣಾ ಕಾರ್ಯಕ್ರಮ ನಡೆಯುತ್ತಿದೆ ಎಂದು ತಿಳಿಸಿದ ಅವರು ಈ ಕಾರ್ಯದಲ್ಲಿ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.