ಡೆಂಗ್ಯೂ ನಿಯಂತ್ರಣ ಕ್ರಮಗಳು

ಮಂಗಳೂರು, ಮೇ ೧೬- ಮಳೆಗಾಲದ ಪ್ರಾರಂಭದಲ್ಲಿ ಡೆಂಗ್ಯೂ ರೋಗ ಪ್ರಸಾರ ಹೆಚ್ಚಾಗಿ ಕಾಣಿಸಿಕೊಳ್ಳುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಸಾರ್ವಜನಿಕರು ಈ ಕೆಳಗಿನಂತೆ ಕ್ರಮಗಳನ್ನು ಕೈಗೊಳ್ಳುವ ಮೂಲಕ ಜಿಲ್ಲೆಯಲ್ಲಿ ಡೆಂಗ್ಯೂ ಜ್ವರ ನಿಯಂತ್ರಣ ಮಾಡಬಹುದಾಗಿರುತ್ತದೆ.
ಡೆಂಗೀ / ಚಿಕುಂಗುನ್ಯಾ ಜ್ವರವು ವೈರಸ್‌ನಿಂದ ಉಂಟಾಗುತ್ತದೆ. ಹಗಲು ಹೊತ್ತಿನಲ್ಲಿ ಕಚ್ಚುವ ಈಡಿಸ್ ಸೊಳ್ಳೆಗಳಿಂದ ಡೆಂಗೀ / ಚಿಕುಂಗುನ್ಯಾ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತವೆ.
ಈಡೀಸ್ ಸೊಳ್ಳೆಗಳು ಸ್ವಚ್ಛ ನೀರಿನ ಸಂಗ್ರಹಗಳಾದ ಮನೆಯಲ್ಲಿನ ತೊಟ್ಟಿ, ಬ್ಯಾರಲ್, ಡ್ರಮ್ ಇತ್ಯಾದಿ ಹಾಗೂ ಮನೆಯ ಸುತ್ತ ಮುತ್ತಲೂ / ಮೇಲ್ಚಾವಣಿಗಳಲ್ಲಿ ಇರಬಹುದಾದ ನಿರುಪಯುಕ್ತ ವಸ್ತುಗಳಲ್ಲಿ ಮಳೆನೀರು ಸಂಗ್ರಹವಾಗಿದ್ದಲ್ಲಿ ಉತ್ಪತ್ತಿಯಾಗುತ್ತವೆ.
ಆದ್ದರಿಂದ ನಿಮ್ಮ ಮನೆಯಲ್ಲಿನ ತೊಟ್ಟಿ, ಬ್ಯಾರಲ್, ಡ್ರಮ್ ಗಳಲ್ಲಿನ ನೀರನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಸ್ವಚ್ಚಗೊಳಿಸಿ ಪುನಃ ನೀರು ತುಂಬಿಸಬೇಕು ಮತ್ತು ಎಲ್ಲಾ ನೀರಿನ ಶೇಖರಣೆಗಳನ್ನು ಮುಚ್ಚಿಡಿ. ಘನ ತ್ಯಾಜ್ಯಗಳನ್ನು ವಿಲೇವಾರಿ ಮಾಡಿ ಪರಿಸರವನ್ನು ಸ್ವಚ್ಚವಾಗಿಡಿ.
ಹಗಲು ಹೊತ್ತಿನಲ್ಲಿ ವಿಶ್ರಾಂತಿ ಪಡೆಯುವವರು, ವಿಶೇಷವಾಗಿ ವೃದ್ಧರು, ಗರ್ಭಿಣಿಯರು ಹಾಗೂ ಮಕ್ಕಳು ಸೊಳ್ಳೆ ಪರದೆಯನ್ನು ಬಳಸಬೇಕು.
ಡೆಂಗೀ / ಚಿಕುಂಗುನ್ಯ ರೋಗಿಗಳೂ ಸಹ ತಪ್ಪದೇ ಸೊಳ್ಳೆಯ
ಪರದೆಯನ್ನು ಉಪಯೋಗಿಸುವುದು.
ಸೊಳ್ಳೆಗಳು ಕಚ್ಚದಂತೆ ಮೈ ತುಂಬಾ ಬಟ್ಟೆಧರಿಸಿ. ಸೊಳ್ಳೆ ಪರದೆ, ಸೊಳ್ಳೆ ಬತ್ತಿ, ಮುಲಾಮು, ದ್ರಾವಣ ಇವುಗಳನ್ನು ಉಪಯೋಗಿಸಿ. ಇದ್ದಕ್ಕಿದ್ದಂತೆ ತೀವ್ರ ಜ್ವರ, ವಿಪರೀತ- ತಲೆನೋವು, ಕಣ್ಣಿನ ಹಿಂಭಾಗದಲ್ಲಿ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು, ವಾಕರಿಕೆ, ವಾಂತಿ ? ಈ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ಸರ್ಕಾರಿ ಆಸ್ಪತ್ರೆ / ವೈದ್ಯರನ್ನು ಸಂಪರ್ಕಿಸಿ.
ಡೆಂಗ್ಯೂ ಜ್ವರಕ್ಕೆ ನಿಗದಿತ ಚಿಕಿತ್ಸೆ ಇಲ್ಲದಿರುವ ಕಾರಣ ರೋಗಲಕ್ಷಣಕ್ಕೆ ಅನುಗುಣವಾಗಿ ಚಿಕಿತ್ಸೆಯನ್ನು ನೀಡಲಾಗುವುದು.
ಈಡಿಸ್ ಲಾರ್ವಾ ಸಮೀಕ್ಷೆಗಾಗಿ ನಿಮ್ಮ ಮನೆಗೆ ಭೇಟಿ ನೀಡುವ ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಸ್ವಯಂ ಸೇವಕರಿಗೆ ಸಹಕಾರ ನೀಡಿ, ಅವರು ನೀಡುವ ಸಲಹೆಗಳನ್ನು ಪಾಲಿಸಿ ಡೆಂಗ್ಯೂ ನಿಯಂತ್ರಣದಲ್ಲಿ ಸಾರ್ವಜನಿಕರು ಸಹಕಾರ ನೀಡಲು ಕೋರಿದೆ.