‘ಡೆಂಗ್ಯೂ’ ಕೊರೊನಾಕ್ಕಿಂತಲೂ ಹೆಚ್ಚು ಅಪಾಯಕಾರಿ

??????

ಪುತ್ತೂರು, ಮೇ ೨೮- ಕೋವಿಡ್ ಸಮಸ್ಯೆ ಹೆಚ್ಚು ಜನರನ್ನು ಬಾಧಿಸುತ್ತಿದೆ. ಅದರೊಂದಿಗೆ ಇದೀಗ ಡೆಂಗ್ಯೂ ಹೆಚ್ಚಾಗುತ್ತಿರುವುದು ಕಂಡು ಬರುತ್ತಿದ್ದು, ಡೆಂಗ್ಯೂ ಮಾರಕ ಕೋವಿಡ್‌ಗಿಂತಲೂ ಹೆಚ್ಚು ಅಪಾಯಕಾರಿಯಾಗಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಿಗಳ ನಿಯಂತ್ರಣಾಧಿಕಾರಿ ಡಾ. ನವೀನ್‌ಚಂದ್ರ ಹೇಳಿದರು.
ಪುತ್ತೂರು ನಗರಸಭೆಯಲ್ಲಿ ಡೆಂಗ್ಯೂ, ಮಲೇರಿಯಾ ಸಾಂಕ್ರಾಮಿಕ ರೋಗಗಳ ಕುರಿತು ಗುರುವಾರ ಆಯೋಜಿಸಲಾದ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾಹಿತಿ ನೀಡಿದರು.
ಕೊರೊನಾಗೆ ಮಾಸ್ಕ್, ಸ್ಯಾನಿಟರ್, ಸಾಮಾಜಿಕ ಆಂತರ ಕಾಪಾಡಿಕೊಳ್ಳುವ ಮೂಲಕ ರೋಗ ಬಾರಂದತೆ ತಡೆಯಬಹುದು. ಕೊರೊನಾಕ್ಕೆ ಇದೀಗ ಔಷಧಿ, ವಾಕ್ಸಿನ್‌ಗಳಿವೆ. ಆದರೆ ಡೆಂಗ್ಯೂ ರೋಗಕ್ಕೆ ಈ ತನಕ ಔಷಧಿ ಬಂದಿಲ್ಲ. ಕೇವಲ ಜ್ವರಕ್ಕೆ ಮಾತ್ರ ಔಷಧಿ ನೀಡಲಾಗುತ್ತಿದೆ. ಡೆಂಗ್ಯೂ ಹರಡಲು ಕಾರಣವಾಗುತ್ತಿರುವ ಸೊಳ್ಳೆಗಳ ನಿಯಂತ್ರಣವೊಂದೇ ಈ ರೋಗವನ್ನು ಇಲ್ಲದಂತೆ ಮಾಡಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿ ಮನೆಗಳಲ್ಲಿ ಜಾಗೃತಿ ಮೂಡಬೇಕಾಗಿದೆ. ಮನೆಯ ಸುತ್ತಲೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ತೊಟ್ಟಿ ಇನ್ನಿತರ ಸ್ಥಳಗಳಲ್ಲಿ ನೀರು ಇದ್ದಲ್ಲಿ ಅದರಲ್ಲಿ ಗಪ್ಪಿ ಮೀನುಗಳನ್ನು ಬಿಡುವ ಮೂಲಕ ಸೊಳ್ಳೆ ಸಂತತಿಗಳನ್ನು ನಾಶಪಡಿಸಬೇಕು. ಇದಕ್ಕಾಗಿ ನಗರಸಭೆಯ ವತಿಯಿಂದ ಯೋಜನೆಗಳನ್ನು ರೂಪಿಸಬೇಕು ಎಂದು ತಿಳಿಸಿದರು.
ನಗರಸಭೆಯ ಅಧ್ಯಕ್ಷ ಜೀವಂಧರ್ ಜೈನ್ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿ ಕೊರೋನಾ ಮಾದರಿಯಲ್ಲಿಯೇ ಡೆಂಗ್ಯೂ ಮತ್ತು ಮಲೇರಿಯಾ ತಡೆಗೆ ಹೋರಾಟ ನಡೆಸಬೇಕಾಗಿದೆ. ಸೊಳ್ಳೆ ನಿಯಂತ್ರಣಕ್ಕಾಗಿ ಈಗಾಗಲೇ ೪ ಹೊಸ ಫಾಗಿಂಗ್ ಯಂತ್ರ ಖರೀದಿಸಲಾಗಿದೆ. ನಾಳೆಯಿಂದಲೇ ಪ್ರತಿ ವಾರ್ಡ್‌ಗಳಲ್ಲಿ ಫಾಗಿಂಗ್ ವ್ಯವಸ್ಥೆ ಮಾಡಲಾಗುವುದು. ಫಾಗಿಂಗ್‌ಗಾಗಿ ೨ ತಂಡಗಳನ್ನು ಮಾಡಲಾಗಿದ್ದು, ಪ್ರತಿಯೊಂದು ತಂಡ ಒಂದು ವಾರ್ಡ್‌ಗಳಲ್ಲಿ ದಿನವಿಡೀ ಫಾಗಿಂಗ್ ನಡೆಸಲಿದೆ. ಇದರೊಂದಿಗೆ ಚರಂಡಿಗಳ ಹೂಳೆತ್ತುವ ಕೆಲಸವನ್ನೂ ನಡೆಸಲಾಗುತ್ತಿದೆ ಎಂದು ಹೇಳಿದರು.
ವೇದಿಕೆಯಲ್ಲಿ ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ಬನ್ನೂರು, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭಾಮಿ ಆಶೋಕ ಶೆಣೈ, ತಾಲೂಕು ಆರೋಗ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ ಉಪಸ್ಥಿತರಿದ್ದರು. ನಗರಸಭಾ ಪ್ರಭಾರ ಮುಖ್ಯಾಧಿಕಾರಿ ಶಬರೀನಾಥ ರೈ ಸ್ವಾಗತಿಸಿ, ವಂದಿಸಿದರು.