ಡೆಂಗ್ಯೂ ಕಾಯಿಲೆ ಬಗ್ಗೆ ಮುನ್ನೆಚ್ಚರಿಕೆ ವಹಿಸಿ: ಡಾ.ಶಶಿಕಲಾ

ದಾವಣಗೆರೆ; ಮೇ.18: ಡೆಂಗ್ಯೂ ತಡೆಗಟ್ಟಲು ಸಮುದಾಯವು ಮುನ್ನೆಚ್ಚರಿಕೆ ವಹಿಸುವ ಜೊತೆಗೆ ಇಲಾಖೆಯೊಂದಿಗೆ ಕೈ ಜೋಡಿಸಿದರೆ ಡೆಂಗ್ಯೂ ಜ್ವರ ಮುಕ್ತ ಕರ್ನಾಟಕವನ್ನಾಗಿ ಮಾಡಬಹುದು ಎಂದು ಆಡಳಿತ ವೈದ್ಯಾಧಿಕಾರಿ ಡಾ.ಶಶಿಕಲಾ ತಿಳಿಸಿದರು.ಕೊಂಡಜ್ಜಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಬೇಸಿಗೆ ಕಾಲ ಹಾಗೂ ಮಳೆಗಾಲದ ಸಮಯದಲ್ಲಿ ಡೆಂಗ್ಯೂ ಪ್ರಕರಣಗಳು ಉಲ್ಬಣವಾಗುತ್ತವೆ. ದಿನಬಳಕೆಗಾಗಿ ಸಂಗ್ರಹಿಸಿದ ನೀರನ್ನು ಯಾವಾಗಲೂ ಮುಚ್ಚಿಡಬೇಕು. ಡೆಂಗ್ಯೂ ತಡೆಗಟ್ಟಬಹುದಾದ ಖಾಯಿಲೆಯಾಗಿದ್ದು, ಭಯ ಬೀಳುವ ಅವ್ಯಶಕತೆಯಿಲ್ಲ ಎಂದರು.ಹಗಲಲ್ಲಿ ಕಚ್ಚುವ ಹೆಣ್ಣು ಈಡೀಸ್ ಸೊಳ್ಳೆಗಳ ನಿಯಂತ್ರಣವೇ ಮುಖ್ಯವಾಗಿದೆ. ಇಲಾಖೆಯ ಜೊತೆಗೆ ಸಮುದಾಯವು ಕೈ ಜೋಡಿಸಿದರೆ ಡೆಂಗ್ಯೂ ಜ್ವರ ಮುಕ್ತ ರಾಜ್ಯವನ್ನಾಗಿ ಮಾಡಬಹುದು ಎಂದರು.ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಎಂ.ವಿ.ಹೊರಕೇರಿ  ಮಾತನಾಡಿ ಡೆಂಗ್ಯೂ ಜ್ವರ ತೀವ್ರಗತಿಯಾದರೆ ಚಿಕಿತ್ಸೆ ಫಲಕಾರಿಯಾಗದು.  ಇದನ್ನು ಮೂಳೆ ಮುರಿತದ ಜ್ವರ ಎಂದು ಕರೆಯುತ್ತಾರೆ.  ಅಧಿಕ ಜ್ವರ, ದೇಹದ ನೋವು, ಕಣ್ಣಿನ ಹಿಂದೆ ನೋವು, ಕಣ್ಣು ಕೆಂಪಾಗುವುದು, ವಾಕರಿಕೆ ಮತ್ತು ವಾಂತಿ, ವಿಪರೀತ ತಲೆನೋವಿನ ಲಕ್ಷಣ ಹಾಗೂ ಯಾವುದೇ ಜ್ವರ ಕಂಡುಬಂದಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.