ಡೆಂಗ್ಯೂ ಕಾಯಿಲೆಯ ಬಗ್ಗೆ ಮುನ್ನೆಚ್ಚರಿಕೆ ವಹಿಸಿ

ಕಲಬುರಗಿ:ಮೇ.16: ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣು, ಕೀಲು ನೋವು, ಬಾಯಿ, ವಸಡು, ಮೂಗಿನಿಂದ ರಕ್ತಸ್ರಾವವಾಗುವುದು, ಚರ್ಮದ ಮೇಲೆ ಅಲ್ಲಲ್ಲಿ ರಕ್ತದ ಗುರುತುಗಳು ಕಂಡುಬಂದರೆ ಇವು ಡೆಂಗ್ಯೂ ಜ್ವರದ ಲಕ್ಷಣಗಳಾಗಿವೆ. ಆಗ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ರಕ್ತ ಪರೀಕ್ಷೆ ಮಾಡಿಸಿಕೊಡು ಸೂಕ್ತ ಚಿಕಿತ್ಸೆ ಪಡೆಯಬೇಕೆಂದು ಆರೋಗ್ಯಾಧಿಕಾರಿ ಡಾ.ಅನುಪಮಾ ಎಸ್.ಕೇಶ್ವಾರ ಸಲಹೆ ನೀಡಿದ್ದಾರೆ.

     ನಗರದ ಶೇಖರೋಜಾದಲ್ಲಿರುವ ಶಹಬಜಾರ 'ನಗರ ಪ್ರಾಥಮಿಕ ಆರೋಗ್ಯ ಕೇಂದ್ರ'ದಲ್ಲಿ 'ಬಸವೇಶ್ವರ ಸಮಾಜ ಸೇವಾ ಬಳಗ'ದ ವತಿಯಿಂದ ಮಂಗಳವಾರ ಜರುಗಿದ 'ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ'ಯಲ್ಲಿ ಅವರು ಮಾತನಾಡುತ್ತಿದ್ದರು.
  ಇನ್ನೂ ಕೆಲವು ದಿವಸÀಗಳಲ್ಲಿ ಮಳೆಗಾಲ ಆರಂಭವಾಗಲಿದ್ದು ಡೆಂಗ್ಯೂ ಕಾಯಿಲೆಯ ಪ್ರಕರಣಗಳು ಕೂಡಾ ಕಂಡುಬರುತ್ತವೆ. ಡೆಂಗ್ಯೂ ಜ್ವರಕ್ಕೆ ಯಾವುದೇ ನಿರ್ದಿಷ್ಟ ಔಷಧಿ ಅಥವಾ ಲಸಿಕೆ ಇರುವುದಿಲ್ಲ. ಮಳೆಗಾಲ ಪ್ರಾರಂಭವಾದರೆ ಹೆಚ್ಚಿನ ಪ್ರಮಾಣದಲ್ಲಿ ಡೆಂಗ್ಯೂ ಜ್ವರ ಕಂಡುಬರುತ್ತದೆ. ಈಡಿಸ್ ಇಜಿಪ್ಟೀ ಎಂಬ ಸೊಳ್ಳೆಯಿಂದ ಉತ್ಪತ್ತಿಯಾಗಿ, ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಈ ಸೊಳ್ಳೆಗಳು ಸ್ವಚ್ಛ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ ಮತ್ತು ಹಗಲಿನ ಹೊತ್ತಿನಲ್ಲಿ ಮನುಷ್ಯರನ್ನು ಕಚ್ಚುತ್ತದೆ ಎಂದರು.
  ಸೊಳ್ಳೆಗಳ ಪರದೆಯನ್ನು ಬಳಸಬೇಕು. ಮನೆಯ ಸುತ್ತ-ಮುತ್ತ ನೀರು ನಿಲ್ಲದಂತೆ ನೋಡಿಕೊಂಡು ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಸೊಳ್ಳೆಗಳ ನಿಯಂತ್ರಣ ರೋಗ ಹತೋಟಿಯ ಪ್ರಮುಖ ಕ್ರಮವಾಗಿದೆ.  ನೀರು ಸಂಗ್ರಹಿಸುವ ತೊಟ್ಟಿಯನ್ನು ಆಗಾಗ್ಗೆ ತೊಳೆಯಬೇಕು. ಬಯಲಿನಲ್ಲಿ ಕಂಡುಬರುವ ತ್ಯಾಜ್ಯಗಳಾದ ಟಯರ್, ಎಳೆ ನೀರಿನ ಚಿಪ್ಪು, ಒಡೆದ ಬಾಟಲಿಯಲ್ಲಿ ಮಳೆ ನೀರು ಸಂಗ್ರಹವಾಗದಂತೆ ಎಚ್ಚರ ವಹಿಸಿ, ಅವುಗಳನ್ನು ಸೂಕ್ತ ವಿಲೇವಾರಿ ಮಾಡುವಂತಹ ಅನೇಕ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ಡೆಂಗ್ಯೂ ಜ್ವರವನ್ನು ಬರದಂತೆ ತಡೆಯಬಹುದಾಗಿದೆಯೆಂದು ತಿಳಿಸಿದರು.
 ಬಳಗದ ಅಧ್ಯಕ್ಷ, ಉಪನ್ಯಾಸಕ ಎಚ್.ಬಿ.ಪಾಟೀಲ, ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗಪ್ಪ ಬಿರಾದಾರ, ನಿವೃತ್ತ ಮುಖ್ಯ ಶಿಕ್ಷಕ ಬಸಯ್ಯಸ್ವಾಮಿ ಹೊದಲೂರ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಪತ್ರಿಕಾ ಕಾರ್ಯದರ್ಶಿ ದೇವೇಂದ್ರಪ್ಪ ಗಣಮುಖಿ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಪುಷ್ಪಾ ಆರ್.ರತ್ನಹೊನ್ನದ್, ನಾಗೇಶ್ವರಿ ಮುಗಳಿವಾಡಿ, ಜಗನಾಥ ಗುತ್ತೇದಾರ, ಗುರುರಾಜ ಕೈನೂರ್, ಗಂಗಾಜ್ಯೋತಿ ಗಂಜಿ, ಲಕ್ಷ್ಮೀ ಮೈಲಾರಿ, ಮಂಗಲಾ ಚಂದಾಪುರೆ, ಚಂದಮ್ಮ ಮರಾಠಾ, ರೇಶ್ಮಾ ನಕ್ಕುಂದಿ, ಅರ್ಚನಾ ಸಿಂಗೆ, ಕಿರಣ ಪಾಟೀಲ, ನಾಗಮ್ಮ ಚಿಂಚೋಳಿ ಸೇರಿದಂತೆ ಇನ್ನಿತರರು ಇದ್ದರು.