ಡೆಂಗೀ ದಿನ: ಜಿಲ್ಲಾ ಮಟ್ಟದ ಜಾಥಾ ಕಾರ್ಯಕ್ರಮ

ಗದಗ,ಮೇ 21 : ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾದಿಕಾರಿಗಳ ಕಾರ್ಯಾಲಯ, ಜಿಲ್ಲಾ ವಾರ್ತಾ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರರಂದು ನಗರದ ತಾಲೂಕಾ ಆರೋಗ್ಯಾಧಿಕಾರಿಗಳ ಕಚೇರಿ ( ದಂಡಪ್ಪ ಮಾನ್ವಿ ಆಸ್ಪತ್ರೆ) ಯಲ್ಲಿ ವಿಶ್ವ ಮಲೇರಿಯಾ ದಿನ ಹಾಗೂ ರಾಷ್ಟ್ರೀಯ ಡೇಂಗಿ ದಿನ ಪ್ರಯುಕ್ತ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಜಾಥಾ ಕಾರ್ಯಕ್ರಮಕ್ಕೆ ಗದಗ ತಾಲೂಕಾ ಆರೋಗ್ಯಾಧಿಕಾರಿ ಡಾ. ಪ್ರೀತ್ ಖೋನಾ ಹಾಗೂ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ. ನೀಲಗುಂದ ಅವರು ಚಾಲನೆ ನೀಡಿದರು. ಸಾರ್ವಜನಿಕರಿಗೆ ಕೀಟಜನ್ಯ ರೋಗಗಳ ಅರಿವು ಮೂಡಿಸುವ ಜಿಲ್ಲಾ ಮಟ್ಟದ ಜಾಥಾವು ತಾಲೂಕಾ ಆರೋಗ್ಯಾಧಿಕಾರಿಗಳ ಕಚೇರಿಯಿಂದ (ಎಮ್.ಸಿ.ಎಚ್. ಆಸ್ಪತ್ರೆ) ಆರಂಭವಾಗಿ ಮಹಾತ್ಮಾ ಗಾಂಧಿ ಸರ್ಕಲ್‍ಗೆ ಬಂದು ಮುಕ್ತಾಯಗೊಂಡಿತು.
ಇದ್ದಕ್ಕಿದ್ದಂತೆ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗ, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುವುದು, ಈ ರೋಗದ ಪ್ರಮುಖ ಲಕ್ಷಣಗಳು, ತೀವ್ರ ಸ್ಥಿತಿಯಲ್ಲಿ ಬಾಯಿ, ಮೂಗು ಮತ್ತು ಒಸಡುಗಳಿಂದ ರಕ್ತಸ್ರಾವ ಹಾಗೂ ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತುಗಳು ಕಾಣಿಸಿಕೊಳ್ಳುವುದು ಡೆಂಗೀ ಜ್ವರದ ಮುಖ್ಯ ಲಕ್ಷಣಗಳಾಗಿವೆ.
ಎಲ್ಲಾ ನೀರಿನ ತೊಟ್ಟೆ, ಡ್ರಮ್ಮು ಬ್ಯಾರೆಲ್, ಏರ್ ಕೂಲರ್ ಇತ್ಯಾದಿಗಳನ್ನು ವಾರಕೊಮ್ಮೆ ಖಾಲಿ ಮಾಡಿ ಒಣಗಿಸಿ ಮತ್ತೆ ಭರ್ತಿ ಮಾಡಿಕೊಳ್ಳುವುದು ನೀರು ಖಾಲಿ ಮಾಡಲು ಸಾಧ್ಯವಿಲ್ಲದ ತೊಟ್ಟಿ ಮುಂತಾದವುಗಳನ್ನು ಸೊಳ್ಳೆಗಳು ಒಳಗೆ ನುಸುಳದಂತೆ ಸರಿಯಾದ ಮುಚ್ಚಳದಿಂದ ಮುಚ್ಚುವುದು, ಬಯಲಿನಲ್ಲಿರುವ ತ್ಯಾಜ್ಯ ವಸ್ತುಗಳಾದ ಟೈರು, ಎಳೆನೀರಿನ ಚಿಪ್ಪು, ಒಡೆದ ಬಾಟಲಿ ಮಳೆನೀರು ಸಂಗ್ರಹವಾಗದಂತೆ ಎಚ್ಚರವಹಿಸುವುದು ಅಥವಾ ಸೂಕ್ತ ವಿಲೇವಾರಿ ಮಾಡುವುದು ಸ್ವಯಂ ರಕ್ಷಣಾ ವಿಧಾನಗಳಾದ ಸೊಳ್ಳೆ ನಿರೋಧಕಗಳನ್ನು ಹಾಗೂ ಸೊಳ್ಳೆ ಪರದೆಯನ್ನು ಬಳಸಿ ಸೊಳ್ಳೆಗಳು ಕಚ್ಚದಂತೆ ಎಚ್ಚರಿಕೆ ವಹಿಸುವುದು ಮುಂಜಾಗ್ರತಾ ಕ್ರಮಗಳ ಕುರಿತು ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಉಮೇಶ ಕರಮುಡಿ, ಗೀತಾ ಎಸ್ ಕಾಂಬಳೆ, ಅನ್ನಪೂರ್ಣ ಶೆಟ್ಟರ್, ತಾಲೂಕಾ ಹಿರಿಯ ಆರೋಗ್ಯ ಅಧಿಕಾರಿ ಹಕ್ಕಿ, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಜಾಥಾದಲ್ಲಿ ಹಾಜರಿದ್ದರು.