ಡೆಂಗೀ ಜಾಗೃತಿ ಜಾಥಾಕ್ಕೆ ಚಾಲನೆ

oplus_2


ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಮೇ.೨೩;ರಾಷ್ಟ್ರೀಯ ಡೆಂಗೀ ದಿನದ ಅಂಗವಾಗಿ ಜನ ಜಾಗೃತಿ ಜಾಥಾಕ್ಕೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಬುಧವಾರ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.ನಗರದ ಐತಿಹಾಸಿಕ ಕೋಟೆ ಮುಂಭಾಗದ ಸೆಂಟ್ ಮೇರಿಸ್ ನರ್ಸಿಂಗ್ ಕಾಲೇಜು ಮುಂಭಾಗದಲ್ಲಿ ಡೆಂಗೀ ಜನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು.ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದ ಮಾತನಾಡಿದ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಇತ್ತೀಚಿನ ದಿನಗಳಲ್ಲಿ ಡೆಂಗ್ಯೂ ಜ್ವರ ಪ್ರಕರಣಗಳು ಹೆಚ್ಚು ಕಂಡು ಬಂದಿದ್ದು, ಸಾರ್ವಜನಿಕರು ಜಾಗೃತಿವಹಿಸಬೇಕು. ನಾಗರೀಕರ ಜಾಗೃತಿಗಾಗಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಲಾಖೆಯ ಮಾರ್ಗದರ್ಶನ ಚಾಚು ತಪ್ಪದೇ ಪಾಲಿಸಿ ಡೆಂಗ್ಯೂ ಜ್ವರ ನಿಯಂತ್ರಿಸಿರಿ ಎಂದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್ ಮಾತನಾಡಿ, ಸಾರ್ವಜನಿಕರೇ ಎಚ್ಚರಗೊಳ್ಳಿ. ಬುದ್ದಿವಂತರಾಗಿ ಸೊಳ್ಳೆಗಳ ಕಡಿತದಿಂದ ಸ್ವಯಂ ರಕ್ಷಣೆ ಪಡೆಯಿರಿ. ಮನೆಯ ಸುತ್ತು-ಮುತ್ತ ನೀರು ನಿಲ್ಲದಂತೆ ಸ್ವಚ್ಚತೆ ಕಾಪಾಡಿ ಎಂದರು.